ಬೀದರ್ ಜಿಲ್ಲೆಯಲ್ಲಿ ಶನಿವಾರ ಸಂಜೆ ಭೂಕಂಪನವಾದ ಅನುಭವವಾಗಿದೆ. ಸಂಜೆ ಸುಮಾರು 4.26ರ ವೇಳೆಗೆ ಕೆಲವೇ ಸೆಕೆಂಡ್ಗಳು ಭೂಮಿ ಕಂಪಿಸಿದ್ದು, ಇದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಬೀದರ್ ಭೂಕಂಪ ರಹಿತ ವಲಯದಲ್ಲಿದ್ದು, ಈ ಪ್ರದೇಶದಲ್ಲಿ ಮೊದಲ ಬಾರಿಗೆ 2.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಭೂಕಂಪ ಶಾಸ್ತ್ರಜ್ಞರು ಹೇಳಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸೀತಾಳಗೇರಾ ಜಿಪಿಯಿಂದ ನೈಋತ್ಯಕ್ಕೆ 3.5 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದೆ.
ಭೂಕಂಪನದ ವಲಯ-2 ರಲ್ಲಿ ಭೂಕಂಪನದ ಕೇಂದ್ರವು ಬೀಳುತ್ತದೆ, ಅಲ್ಲಿ ಭೂಕಂಪದಿಂದ ಹಾನಿಯಾಗುವ ಸಾಧ್ಯತೆಯು ತುಂಬಾ ಕಡಿಮೆಯಾಗಿದೆ. ಅಲ್ಲದೆ, ಟೆಕ್ಟೋನಿಕ್ ನಕ್ಷೆಯ ಪ್ರಕಾರ ಯಾವುದೇ ರಚನಾತ್ಮಕ ಸ್ಥಗಿತಗಳಿಂದ ಅಧಿಕೇಂದ್ರವು ಶೂನ್ಯವಾಗಿದೆ ಎಂದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಹೇಳಿದೆ. ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಅವರ ಮಾಹಿತಿ ಆಧರಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಬೀದರ್ ಜಿಲ್ಲೆಯಲ್ಲಿ ಭೂಕಂಪನ ಆಗಿರುವುದನ್ನು ದೃಢೀಕರಿಸಿದ್ದಾರೆ.