ಅನುಷಾ ರೈ ಹಾಗೂ ಧರ್ಮ ಹಲವು ವರ್ಷಗಳಿಂದ ಗೆಳೆಯರು. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಇವರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ಧರ್ಮ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಧರ್ಮ ಕೂಡ ಅನುಷಾ ಮೇಲೆ ವಿಶೇಷ ಕಾಳಜಿ ತೋರಿಸುತ್ತಾರೆ. ಆದರೆ, ಈ ವಾರ ಎಲ್ಲವೂ ಬದಲಾಗಿತ್ತು. ಧರ್ಮ ಹಾಗೂ ಅನುಷಾ ಮಧ್ಯೆ ಮುನಿಸು ಮೂಡಿತ್ತು. ಈಗ ಸಿಹಿಮುತ್ತಿನಿಂದ ಎಲ್ಲವೂ ತಿಳಿಯಾಗಿದೆ. ಮುನಿಸು ಮರೆಯಾಗಿದೆ.
ಅನುಷಾ ಹಾಗೂ ಧರ್ಮ ಈ ಬಾರಿ ಒಟ್ಟಿಗೆ ಇರೋಕೆ ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಜೋಡಿ ಟಾಸ್ಕ್. ಅನುಷಾ ಅವರು ಸುರೇಶ್ಗೆ ಜೊತೆಯಾದರೆ ಧರ್ಮ ಅವರು ಐಶ್ವರ್ಯಾಗೆ ಜೊತೆಯಾದರು. ಇನ್ನು ನೇರ ನಾಮಿನೇಷನ್ ಮಾಡುವಾಗ ಧರ್ಮ ಅವರು ಅನುಷಾ ತಂಡವನ್ನು ನಾಮಿನೇಟ್ ಮಾಡಿದರು. ಇದು ಅನುಷಾ ಕೋಪಕ್ಕೆ ಕಾರಣ ಆಯಿತು. ಅವರು ಇದನ್ನು ಸಹಿಸಿಕೊಳ್ಳಲೇ ಇಲ್ಲ. ಈ ಕಾರಣಕ್ಕೆ ಇಬ್ಬರ ಮಧ್ಯೆ ಕಿತ್ತಾಟ ನಡೆಯಿತು.
ಕೆಲವು ದಿನಗಳ ಕಾಲ ಅನುಷಾ ಹಾಗೂ ಧರ್ಮ ಸರಿಯಾಗಿ ಮಾತನಾಡಿಕೊಳ್ಳಲೇ ಇಲ್ಲ. ಇತ್ತೀಚೆಗೆ ಇಬ್ಬರೂ ಕುಳಿತು ಮಾತನಾಡಿದ್ದರು. ‘ನನಗೆ ಎಲ್ಲರೂ ನಾಲಾಯಕ್ ಎಂದರು. ಹೀಗಾಗಿ, ನಾನು ನನ್ನ ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದರು ಧರ್ಮ. ಇದನ್ನು ಅನುಷಾ ಅರ್ಥ ಮಾಡಿಕೊಂಡರು. ಈ ಮಾತುಕತೆಯಿಂದ ಪರಿಸ್ಥಿತಿ ಸ್ವಲ್ಪ ತಿಳಿ ಆಯಿತು.
ಈಗ ಜೋಡಿ ಟಾಸ್ಕ್ ನಡೆಯುವಾಗಲೇ ಕಿಚನ್ನಲ್ಲಿ ಅನುಷಾ, ಧರ್ಮ, ಸುರೇಶ್ ಹಾಗೂ ಐಶ್ವರ್ಯಾ ನಿಂತಿದ್ದರು. ಈ ವೇಳೆ ಅನುಷಾ ಹಾಗೂ ಧರ್ಮ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳಬೇಕು ಎಂದು ಕೋರಲಾಯಿತು. ಅದೇ ರೀತಿ ಧರ್ಮ ಹಾಗೂ ಅನುಷಾ ಕ್ಲೋಸ್ಅಪ್ನಲ್ಲಿ ಬಂದರು. ಆಗ ಧರ್ಮ ಅವರು ಅನುಷಾರನ್ನು ಎಳೆದುಕೊಂಡು ತಲೆಗೆ ಮುತ್ತಿಟ್ಟರು. ಈ ಮೂಲಕ ಮುನಿಸು ಕೊನೆ ಆಯಿತು.