ವೀಕೆಂಡ್ ಟೆನ್ಷನ್ನಲ್ಲಿರೋ ಬಿಗ್ಬಾಸ್ ಮನೆ ಮಂದಿಗೆ ಬೆಚ್ಚಿಬಿದ್ದ ಘಟನೆಯೊಂದು ನಡೆದಿದೆ. ಒಂದು ಕ್ಷಣ ದೊಡ್ಮನೆಯಲ್ಲಿ ದೆವ್ವ ಭೂತಗಳು ಬಂದ ರೀತಿಯಲ್ಲಿ ಸ್ಪರ್ಧಿಗಳು ಗಾಬರಿಯಾಗಿದ್ದು, ಎಲ್ಲರೂ ಕಿರುಚಾಡಿಕೊಂಡಿದ್ದಾರೆ. ಅಡುಗೆ ಮನೆಯಲ್ಲಿ ಗೌತಮಿ ಜಾಧವ್ ಅವರು ಲಟ್ಟಣಿಗೆ ಹಿಡಿದು ಚಪಾತಿ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿ ಅಗೋಚರ ದೃಶ್ಯ ಕಾಣಿಸಿದೆ. ಇದರಿಂದ ಗಾಬರಿಯಾದ ಗೌತಮಿ ಅದೇ ಅಲ್ಲಿ ಯಾರು ಎಂದಿದ್ದಾರೆ. ಅಲ್ಲಿಂದ ಓಡಿ ಬಂದ ಗೌತಮಿ, ಭಯದಿಂದ ಮೋಕ್ಷಿತಾರನ್ನು ಹಿಡಿದುಕೊಂಡು ನಿಲ್ಲುತ್ತಾರೆ. ಆಗ ಮೋಕ್ಷಿತಾ ಕೂಡ ಬೆಚ್ಚಿಬಿದ್ದಾರೆ. ಅದೇ ವೇಳೆ ವಿಕಾರವಾದ ಮುಖವೊಂದು ಕಾಣಿಸಿಕೊಂಡಿದೆ. ಆಗ ಉಗ್ರಂ ಮಂಜು ಕೂಡ ಬೆಚ್ಚಿಬಿದ್ದು ಜೋರಾಗಿ ಕಿರುಚಿಕೊಂಡಿದ್ದಾರೆ. ನಂತರ ಅದರ ಅಸಲಿ ಕತೆ ರಿವೀಲ್ ಆಗಿದೆ.
ಕಲರ್ಸ್ ಕನ್ನಡದಲ್ಲಿ ‘ನೂರು ಜನ್ಮಕ್ಕೂ’ ಎಂಬ ಹೊಸ ಧಾರಾವಾಹಿ ಬರ್ತಿದೆ. ಆ ತಂಡ ಬಿಗ್ಬಾಸ್ ಮನೆಗೆ ಲಗ್ಗೆ ಇಟ್ಟಿದೆ. ಧಾರಾವಾಹಿಯಯಲ್ಲಿ ನಾಯಕನ ಮೇಲೆ ಆತ್ಮವೊಂದು ದ್ವೇಷ ಕಾರುತ್ತಿದೆ. ಈ ಆತ್ಮಕ್ಕೆ ನಾಯಕನ ಮೇಲೆ ಯಾಕೆ ದ್ವೇಷವಿರುತ್ತದೆ? ರಾಯರ ಅಪ್ಪಟ ಭಕ್ತೆಯಾಗಿರುವ ನಾಯಕಿ ಆ ಆತ್ಮದಿಂದ ತನ್ನ ಪ್ರೀತಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ? ಆ ಆತ್ಮಕ್ಕೂ ಹಾಗೂ ನಾಯಕನಿಗೂ ಏನು ಸಂಬಂಧ? ನಾಯಕನ ತಪ್ಪೇನು? ಅನ್ನೋದೇ ಧಾರಾವಾಹಿ ಕಥೆ ಆಗಿದೆ. ಹೀರೋ ಆಗಿ ಗೀತಾ ಸೀರಿಯಲ್ ಖ್ಯಾತಿಯ ಧನುಷ್ ಗೌಡ ಕಂಬ್ಯಾಕ್ ಮಾಡಿದ್ದಾರೆ. ನಾಯಕಿಯಾಗಿ ಶಿಲ್ಪಾ ಕಾಮತ್ ನಟಿಸುತ್ತಿದ್ದಾರೆ. ಆತ್ಮದ ಪಾತ್ರವನ್ನು ಚಂದನಾ ಗೌಡ ಬಣ್ಣ ಹಚ್ಚಿದ್ದಾರೆ. ಅಂತೆಯೇ ಬಿಗ್ಬಾಸ್ ಮನೆಯಲ್ಲಿ ಆತ್ಮರೂಪದಲ್ಲಿ ಚಂದನಾ ಗೌಡ ಅವರ ಮುಖ ಕಾಣಿಸಿದೆ. ಇದನ್ನು ನೋಡಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.