ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದು ಸುಲಭ ಅಲ್ಲ. ಅದರಲ್ಲೂ ದೊಡ್ಮನೆ ಒಳಗೆ ಇರುವ ಸ್ಪರ್ಧಿಗಳು ಮಿತಿ ಮೀರಿ ನಡೆದುಕೊಂಡಾಗ ಅವರನ್ನು ದಾರಿಗೆ ತರುವುದು ಕೂಡ ಕಷ್ಟದ ಕೆಲಸ. ಯಾರಿಗೂ ಅನ್ಯಾಯ ಆಗದೇ ರೀತಿಯಲ್ಲಿ ಸುದೀಪ್ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ಈ ಸೀಸನ್ನಲ್ಲಿ ಒಂದಷ್ಟು ಟ್ವಿಸ್ಟ್ಗಳು ಎದುರಾಗಿವೆ. ಜಗದೀಶ್ ಅವರನ್ನು ಮಿಡ್ ವೀಕ್ನಲ್ಲೇ ಹೊರಗೆ ಹಾಕಲಾಗಿದೆ. ರಂಜಿತ್ ಕೂಡ ನಿಯಮ ಉಲ್ಲಂಘಿಸಿ ಎಲಿಮಿನೇಟ್ ಆಗಿದ್ದಾರೆ. ಆದರೆ ತಮಗೆ ಇನ್ನೊಂದು ಅವಕಾಶ ಬೇಕು ಎಂದು ಜಗದೀಶ್ ಕೇಳಿದ್ದಾರೆ.
ಬಿಗ್ ಬಾಸ್ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿ ಎಲಿಮಿನೇಟ್ ಆದವರನ್ನು ಮತ್ತೆ ವೇದಿಕೆಗೆ ಕರೆಸಿ ಸುದೀಪ್ ಅವರು ಮಾತನಾಡುವುದಿಲ್ಲ. ಆದರೆ ಈ ಬಾರಿ ಜಗದೀಶ್ ಅವರನ್ನು ವಿಡಿಯೋ ಕಾಲ್ ಮೂಲಕ ಸುದೀಪ್ ಅವರು ಮಾತನಾಡಿಸಿದರು. ತಾವು ಮಾಡಿದ ತಪ್ಪಿಗೆ ಜಗದೀಶ್ ಅವರು ಕ್ಷಮೆ ಕೇಳಿದ್ದಾರೆ. ಅಲ್ಲದೇ ಸಾಧ್ಯವಾದರೆ ತಮ್ಮನ್ನು ಪುನಃ ಬಿಗ್ ಬಾಸ್ ಆಟಕ್ಕೆ ಸೇರಿಸಿಕೊಳ್ಳಿ ಎಂದು ಜಗದೀಶ್ ಅವರು ಮನವಿ ಮಾಡಿದ್ದಾರೆ.
ಈ ಬಾರಿ ಜಗದೀಶ್ ಅವರು ಎಲಿಮಿನೇಟ್ ಆಗಿದ್ದಕ್ಕೆ ಕೇವಲ ಅವರೊಬ್ಬರ ತಪ್ಪು ಮಾತ್ರ ಕಾರಣವಲ್ಲ. ಬೇರೆಯವರ ಪ್ರಚೋದನೆ ಕೂಡ ಕಾರಣ ಆಗಿದೆ. ಅಲ್ಲದೇ, ಇನ್ನುಳಿದವರು ಕೂಡ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಾದವನ್ನು ಕೂಡ ಕೇಳಬೇಕು ಎಂಬ ಉದ್ದೇಶದಿಂದ ವಿಡಿಯೋ ಕಾಲ್ ಮೂಲಕ ಅವರನ್ನು ಮಾತನಾಡಿಸಲಾಗಿದೆ. ಈ ವೇಳೆ ಅವರು ಮತ್ತೆ ಬಿಗ್ ಬಾಸ್ ಮನೆಯ ಒಳಗೆ ಬರುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.
ಜಗದೀಶ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಕಾಲಿಡುತ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಿಗೆ ಇದೆ. ಅದಕ್ಕೆ ಸುದೀಪ್ ಅವರು ತಮ್ಮ ನಿರ್ಧಾರ ತಿಳಿಸಿದ್ದಾರೆ. ತಪ್ಪು ಮಾಡಿ ಮನೆಯಿಂದ ಹೊರಗೆ ಹಾಕಿಸಿಕೊಂಡವರನ್ನು ಪುನಃ ಮನೆಯ ಒಳಗೆ ಕರೆಸಿಕೊಳ್ಳಬೇಕು ಎಂಬುದಾದರೆ 3ನೇ ಸೀಸನ್ನಲ್ಲಿ ಹಲ್ಲೆ ಮಾಡಿ ಹೊರಹಾಕಿಸಿಕೊಂಡ ಹುಚ್ಚ ವೆಂಕಟ್ ಅವರನ್ನು ಕೂಡ ಮತ್ತೆ ಕರೆಸಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲ. ಅದನ್ನು ಸುದೀಪ್ ಅವರು ಸ್ಪಷ್ಟಪಡಿಸಿದ್ದಾರೆ. ‘ಹೋಗಿರುವವರ ಬಗ್ಗೆ ಜಾಸ್ತಿ ಮಾತಾಡಲ್ಲ’ ಎನ್ನುವ ಮೂಲಕ ಸುದೀಪ್ ಅವರು ಎಪಿಸೋಡ್ ಪೂರ್ಣಗೊಳಿಸಿದ್ದಾರೆ.