ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಇಂದು ಮತ್ತೊಂದು ಸೇತುವೆ ಕುಸಿದಿದೆ. ಈ ಮೂಲಕ 3 ವಾರಗಳಲ್ಲಿ ರಾಜ್ಯದಲ್ಲಿ ನಡೆದ 13 ನೇ ದುರ್ಘಟನೆ ಇದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೊಂದು ಕಿರು ಸೇತುವೆ ಆಗಿದ್ದು, ಸುತ್ತಮುತ್ತಲಿನ ಹಳ್ಳಿಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜ್ಯೋತಿ ಕುಮಾರ್ ಹೇಳಿದ್ದಾರೆ.
ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್ಗಂಜ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ಸೇತುವೆ ಕುಸಿತದ ಸರಣಿ ಘಟನೆಗಳು ಸಂಭವಿಸಿದ್ದು, ಬಿಹಾರ ಸರ್ಕಾರ 15 ಎಂಜಿನಿಯರ್ಗಳನ್ನು ಅಮಾನತುಗೊಳಿಸಿದೆ. ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ, ತಕ್ಷಣ ದುರಸ್ತಿ ಮಾಡಬೇಕಾದ ಸೇತುವೆಗಳನ್ನು ಗುರುತಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಕಳೆದ ವಾರ ಸೂಚನೆ ನೀಡಿದ್ದರು.