ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಕೋಟಾಗಳನ್ನು ಶೇ.50ರಿಂದ 65ಕ್ಕೆ ಹೆಚ್ಚಿಸಲು ಬಿಹಾರದ ನಿತೀಶ್ ಕುಮಾರ್ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ರದ್ದು ಮಾಡಿದ್ದ ಪಟನಾ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಇದರಿಂದ ಬಿಹಾರ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಸಿಜೆಐ ಡಿ.ವೈ. ಚಂದ್ರ ಚೂಡ್ ಅವರಿದ್ದ ಸದಸ್ಯ ಪೀಠವು ತಡೆ ನೀಡಲು ಮತ್ತು ಸಂಬಂಧಿಸಿದವರಿಗೆ ನೋಟಿಸ್ ಕೊಡಲು ನಿರಾಕರಿಸಿತು. ಆದರೆ ಹೈಕೋರ್ಟ್ ತೀರ್ಪಿನ ವಿರುದ್ಧ ಬಿಹಾರ ಸರ್ಕಾರ ಸಲ್ಲಿಸಿರುವ 10 ಅರ್ಜಿಗಳನ್ನು ಆಲಿಸಲು ಒಪ್ಪಿತು ಮತ್ತು ಸೆಪ್ಟೆಂಬರ್ನಲ್ಲಿ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿತು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ʻಛತ್ತೀಸ್ಗಢದಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಹೈಕೋರ್ಟ್ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಬಿಹಾರ ವಿಚಾರದಲ್ಲೂ ತಡೆ ನೀಡಬೇಕು’ ಎಂದು ಕೇಳಿದರು. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿತು.