ರಾಜ್ಯಪಾಲರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಖಂಡಿಸಿ ಹಾಗೂ ರಾಜ್ಯ ಸರ್ಕಾರದ ಹಗರಣಗಳ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಗುರುವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ರಾಜ್ಯ ಕೋರ್ಕಮಿಟಿ ಸದಸ್ಯರು, ಸ್ಥಳೀಯ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗವಹಿಸುವರು. ಜನಪ್ರತಿನಿಧಿಗಳು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯಪಾಲರ ಭಾವಚಿತ್ರಕ್ಕೆ ಅವಮಾನ ಮಾಡಿದೆ. ಅಲ್ಲದೆ, ಕೆಲವೆಡೆ ಭಾವಚಿತ್ರವನ್ನು ದಹಿಸಲಾಗಿದೆ. ಇದಲ್ಲದೆ, ಸಚಿವರಾದ ಜಮೀರ್ ಅಹ್ಮದ್, ಕೃಷ್ಣ ಬೈರೇಗೌಡ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಸೇರಿ ಮೊದಲಾದವರು ರಾಜ್ಯಪಾಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಪ್ರಧಾನಿಯವರ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ್ದಾರೆ. ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳನ್ನು ಕಾಂಗ್ರೆಸ್ಸಿಗರು ನೀಡುತ್ತಿದ್ದು, ಇದರ ವಿರುದ್ಧ ಪೊಲೀಸ್ ಇಲಾಖೆಯು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.