ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಅಹೋರಾತ್ರಿ ಧರಣಿ ಮುಂದುವರಿದಿದೆ. ಚರ್ಚೆಗೆ ಅವಕಾಶ ನೀಡದಿದ್ದರೆ ಇಂದೂ ಸಹ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಪಕ್ಷ ನಾಯಕರು ಹೇಳಿದ್ದಾರೆ. ಈ ಮಧ್ಯೆ, ಮುಡಾ ಚರ್ಚೆಗೆ ಅವಕಾಶ ನೀಡಿದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.
ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಕಳೆದ ಒಂದು ವಾರದಿಂದ ಹಗರಣಗಳದ್ದೇ ಸದ್ದು. ಮುಡಾ ಸೈಟು ಹಂಚಿಕೆ, ವಾಲ್ಮೀಕಿ ನಿಗಮದಲ್ಲಾಗಿರುವ ಬಹುಕೋಟಿ ಹಗರಣದ ವಿರುದ್ಧ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳ ಹೋರಾಟ ತೀವ್ರಗೊಂಡಿದೆ. ಇಷ್ಟು ದಿನ ಸದನದ ಬಾವಿಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿ, ಜೆಡಿಎಸ್ ಸದಸ್ಯರು ಬುಧವಾರದಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಅತ್ತ ದಲಿತರ ಹಣವೂ ಲೂಟಿ, ಇತ್ತ ಮುಡಾವೂ ಲೂಟಿ, ಹಗರಣಗಳ ಸರದಾರ, ಕಾಂಗ್ರೆಸ್ ಸರ್ಕಾರ ಅಂತಾ ಭಿತ್ತಿಪತ್ರ ಹಿಡಿದುಕೊಂಡು ಧರಣಿ ಆರಂಭಿಸಿದ ಬಿಜೆಪಿ, ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
ಧರಣಿ ಮುಂದುವರಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು ಭಜನೆ, ಹಾಡಿನ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದರು. ಕಂಜಿರಾ, ತಾಳ ಬಡಿಯುತ್ತಾ ಭಜನೆ ಜೊತೆಗೆ ಸಿನಿಮಾದ ಹಾಡುಗಳನ್ನೂ ಹಾಡಿದ್ದಾರೆ. ಬಿವೈ ವಿಜಯೇಂದ್ರ, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಬಿಜೆಪಿ ಸದಸ್ಯರು ವಿಧಾನಸೌಧದ ಕಾರಿಡಾರ್ನಲ್ಲಿ ಭಜನೆ ಮಾಡುತ್ತಾ ಹೆಜ್ಜೆ ಹಾಕಿದರು. ವಿಧಾನಪರಿಷತ್ಗೆ ತೆರಳಿದ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರಿಷತ್ ಸದಸ್ಯರ ಜೊತೆಗೆ ಮಾತುಕತೆ ಮಾಡುತ್ತಾ, ಗಾನಗೋಷ್ಠಿಗೆ ದನಿಗೂಡಿಸಿದರು. ಇದೇ ವೇಳೆ ಜೆಡಿಎಸ್ ಸದಸ್ಯ ಬೋಜೇಗೌಡ ‘ಅನ್ಯಾಯಕಾರಿ ಬ್ರಹ್ಮ’ ಅಂತಾ ಹಾಡುವುದರ ಜೊತೆಗೆ ನಾಟಕದ ಡೈಲಾಗ್ ಹೇಳಿ ಇತರ ಸದಸ್ಯರನ್ನು ರಂಜಿಸಿದರು. ಇದೇ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ ಭೇಟಿ ನೀಡಿ ವಿಪಕ್ಷ ಶಾಸಕರ ಯೋಗಕ್ಷೇಮ ವಿಚಾರಿಸಿದರು. ಆರ್. ಅಶೊಕ್ ಜೊತೆಗೂ ಮಾತುಕತೆ ನಡೆಸಿದರು.