ಬೆಳಗಾವಿಯ ಚಳಿಗಾಲದ ಅಧಿವೇಶನ ಕೊನೆಯ ಘಟ್ಟ ತಲುಪಿದೆ. ಈ ಹೊತ್ತಿನಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇ* ಎಂಬ ಅವಾಚ್ಯ ಪದವನ್ನು ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪರಿಷತ್ನಲ್ಲಿ ಬಿಜೆಪಿ ಸದಸ್ಯರು ಪ್ರಾಸ್ಟೂ* ಎಂಬ ಪದ ಬಳಕೆ ಮಾಡಿದ್ದಾರೆ. ಸಿ.ಟಿ. ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ವೇ* ಎಂದು ಹೇಳಿದ್ದಾರೆ. ಈ ಪದವನ್ನು ಬಳಕೆ ಮಾಡಿದ್ದರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತೀವ್ರ ಅಸಮಧಾನಗೊಂಡಿದ್ದಾರೆ. ಇದರಿಂದ ತಮಗಾದ ಅವಮಾನವನ್ನ ತಡೆದುಕೊಳ್ಳಲಾಗದೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಣ್ಣೀರು ಹಾಕುತ್ತಾ ಪರಿಷತ್ತಿನಿಂದ ಹೊರಗೆ ಹೋಗಿದ್ದಾರೆ. ಈ ಬಗ್ಗೆ ಮಾತನಾಡಿದ ನಾಗರಾಜ್ ಯಾದವ್ ಅವರು ರಾಜ್ಯದ ಒಬ್ಬ ಪ್ರತಿಷ್ಠಿತ ಮಂತ್ರಿಗಳಿಗೆ ಹೀಗೆ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಸದಸ್ಯರು ಸಿ.ಟಿ. ರವಿ ಅವರು ಹಾಗೇ ಮಾತನಾಡಿಲ್ಲ ಎಂದು ವಾದಿಸಿದ್ದಾರೆ. ಈ ಘಟನೆ ನಡೆಯುವ ಮೊದಲು ಸಿ.ಟಿ. ರವಿ ಹೊರಗೆ ಹೋಗಿದ್ದಾರೆ. ಅವರು ಹೊರಗೆ ಹೋದ ಬಳಿಕ ಗಲಾಟೆ ಜೋರಾಗಿ ಕಾಂಗ್ರೆಸ್ ಸದಸ್ಯರು ಕೂಡ ಹೊರಗೆ ಎದ್ದು ಹೋಗಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೀಡಿಯಾ ಗ್ಯಾಲರಿ ಬಳಿ ಬಂದು ತಮಗಾದ ಅವಮಾನದ ನೋವಿನ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಬೆನ್ನಲ್ಲಿಯೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರ ವಿರುದ್ಧ ದೂರು ನೀಡಿದ್ದಾರೆ.