ಭೀಕರ ಭೂಕುಸಿತಕ್ಕೆ ದೇವರನಾಡೇ ನಲುಗಿ ಹೋಗಿದೆ. ಸಾವಿನ ಸುರಿಮಳೆಗೆ ವಯನಾಡಲ್ಲಿ ಮೃತರ ಸಂಖ್ಯೆ 350ರ ಗಡಿ ದಾಟಿದ್ದು, 6ನೇ ದಿನಕ್ಕೆ ಸೇನಾ ಕಾರ್ಯಾಚರಣೆ ಕಾಲಿಟ್ಟಿದೆ. ಘಟನಾ ಸ್ಥಳಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ. ಇಡೀ ದೇಶವನ್ನೇ ಈ ದೃಶ್ಯ ಕಂಡು ಕಂಬನಿ ಮಿಡಿದಿದೆ. ಆದ್ರೆ ರಾಜಸ್ಥಾನದ ಬಿಜೆಪಿ ನಾಯಕರೊಬ್ಬರು ನೀಡಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ಬಿಜೆಪಿ ಮಾಜಿ ಸಂಸದರೂ ಆಗಿರುವ ನಾಯಕ ಜ್ಞಾನದೇವ್ ಅಹುಜಾ, ವಯನಾಡು ದುರಂತಕ್ಕೆ ಕೇರಳದಲ್ಲಿನ ಗೋ ಹತ್ಯೆ ಚಟುವಟಿಕೆಗಳು ಕಾರಣ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಎಲ್ಲೆಲ್ಲಿ ಗೋಹತ್ಯೆಗಳು ನಡೆಯುತ್ತವೆಯೋ, ಅಂತಹ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಮುಂದುವರಿಯುತ್ತದೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ದುರಂತಗಳು ಗೋಹತ್ಯೆಯ ನೇರ ಪರಿಣಾಮವಾಗಿದೆ. ಕೇರಳದಲ್ಲಿ ಗೋಹತ್ಯೆಯ ಚಟುವಟಿಕೆಗಳನ್ನು ನಿಲ್ಲಿಸದೇ ಹೋದಲ್ಲಿ ಇದೇ ರೀತಿಯ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಂತಹ ಭಾಗಗಳಲ್ಲಿ ಕೂಡ ಮೇಘ ಸ್ಫೋಟ ಹಾಗೂ ಭೂ ಕುಸಿತದಂತಹ ನೈಸರ್ಗಿಕ ವಿಕೋಪಗಳು ಪದೇ ಪದೇ ಸಂಭವಿಸುತ್ತಲೇ ಇರುತ್ತವೆ. ಆದರೆ ಕೇರಳದಲ್ಲಿ ಸಂಭವಿಸಿದ ಘಟನೆಯಷ್ಟು ವಿನಾಶಕಾರಿ ಪರಿಣಾಮ ಅವು ಉಂಟುಮಾಡುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
2018ರಿಂದಲೂ, ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವ ಪ್ರದೇಶಗಳಲ್ಲಿ ಅಂತಹ ದುರಂತ ಘಟನೆಗಳು ನಡೆಯುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಗೋ ಹತ್ಯೆ ತಡೆ ನಡೆಯದೇ ಹೋದರೆ, ಕೇರಳದಲ್ಲಿ ಇದೇ ರೀತಿಯ ಘಟನೆಗಳು ಮುಂದೆಯೂ ನಡೆಯುತ್ತಲೇ ಇರುತ್ತವೆ ಎಂದು ಅಹುಜಾ ಎಚ್ಚರಿಕೆ ನೀಡಿದ್ದಾರೆ.