ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಬೆಂಗಳೂರಿನಿಂದ ಕೈಗೊಂಡಿರುವ ಪಾದಯಾತ್ರೆ 7ನೆಯ ದಿನ ಮೈಸೂರು ತಲುಪಿದೆ. ಪಾದಯಾತ್ರೆಯ ಸಮಾರೋಪದ ಭಾಗವಾಗಿ ಶನಿವಾರ, ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯನ್ನು ಬಿಜೆಪಿ ಮುಖಂಡರು ಹೊಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ತವರೂರಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸುವ ನಿರೀಕ್ಷೆ ಇದೆ. ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದಿನ ಹೋರಾಟಗಳ ಕುರಿತು ಇದೇ ವೇದಿಕೆಯಲ್ಲಿ ಘೋಷಣೆ ಮಾಡುವ ನಿರೀಕ್ಷೆ ಕೂಡ ಇದೆ.
ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪರಿಶಿಷ್ಟರಿಗೆ ಮೀಸಲಾದ ಅನುದಾನ ದುರ್ಬಳಕೆ ವಿಚಾರವಾಗಿ ಕಳೆದ ಶನಿವಾರ ಬೆಂಗಳೂರಿನ ಕೆಂಗೇರಿಯಿಂದ ಆರಂಭವಾದ ಈ 128 ಕಿ.ಮೀ. ಪಾದಯಾತ್ರೆ ರಾಮನಗರ, ಮಂಡ್ಯದ ಮೂಲಕ ಸಾಗಿ ಶುಕ್ರವಾರ ಮೈಸೂರು ಪ್ರವೇಶಿಸಿದೆ. ಕಾಂಗ್ರೆಸ್ ಜನಾಂದೋಲನ ನಡೆದ ಮಹಾರಾಜ ಕಾಲೇಜು ಮೈದಾನದಲ್ಲೇ ಶನಿವಾರ ಬೆಳಗ್ಗೆ 11ಕ್ಕೆ ʻಮೈಸೂರು ಚಲೋʼ ಸಮಾರೋಪವೂ ನಡೆಯಲಿದೆ.
ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ಹಾಕಿದ್ದ ವೇದಿಕೆಯಲ್ಲೇ ಬಿಜೆಪಿ ಸಮಾವೇಶ ನಡೆಯಲಿದೆ. ಎರಡೂ ಸಮಾವೇಶಗಳ ವೇದಿಕೆಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡ ಒಬ್ಬನೇ ಆಗಿರುವ ಹಿನ್ನೆಲೆ ಯಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಸಮಾವೇಶಗಳು ಒಂದೇ ವೇದಿಕೆಯಲ್ಲಿ ನಡೆಯುವಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಶೆಟ್ಟರ್, ಅಶೋಕ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿ ಕೊನೆ ಕ್ಷಣದಲ್ಲಿ ರದ್ದಾಗಿದೆ.