ಬಿಜೆಪಿಯ ರೆಬೆಲ್ ನಾಯಕರು ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ವಿಜಯೇಂದ್ರ ನಾಯಕತ್ವಕ್ಕೆ ವಿರುದ್ಧ ಇರುವ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಲಿಂಬಾವಳಿ ಅವರು ಇಂದು ಕುಮಾರ್ ಬಂಗಾರಪ್ಪ ಮನೆಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಮಾತುಕತೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರವಿಂದ್ ಲಿಂಬಾವಳಿ, ಜನಕ್ಕೆ ತೊಂದರೆ ಆಗುತ್ತಿರುವ ಸಮಸ್ಯೆ ವಕ್ಫ್ ಸಮಸ್ಯೆ, ಇದು ಎಲ್ಲರ ಗಮನಕ್ಕೆ ಬಂದಿದೆ, ಯತ್ನಾಳ್ ಅವರು ವಿಜಯಪುರದಲ್ಲಿ ಧರಣಿ ನಡೆಸಿದರು. ವಕ್ಫ್ ತಿದ್ದುಪಡಿಗಾಗಿ ಕೇಂದ್ರದ ನಾಯಕರು ಭೇಟಿ ನೀಡಿ ಮಾಹಿತಿ ತೆಗೆದುಕೊಂಡಿದ್ದಾರೆ. ಅದಾದ ಬಳಿಕವೇ ಯತ್ನಾಳ್ ಅವರು ಧರಣಿ ನಿಲ್ಲಿಸಿದ್ದಾರೆ. ನಮ್ಮ ನಾಯಕರು ಅನೇಕ ದೂರು ಸಲ್ಲಿಸುತ್ತಿದ್ದಾರೆ. ಅದ್ದರಿಂದ ನಾವೆಲ್ಲರೂ ಸೇರಿ ರೆಬೆಲ್ ಬಿಜೆಪಿಯಿಂದ ಜನಜಾಗೃತಿ ಅಭಿಯಾನ ನಡೆಸುತ್ತೇವೆ.
ನವೆಂಬರ್ 25 ರಿಂದ ಒಂದು ತಿಂಗಳ ಕಾಲ ಅಭಿಯಾನ ಮಾಡುತ್ತೇವೆ. ಇದರ ಬಗ್ಗೆ ಎಲ್ಲ ಜನರಿಗೆ ಮಾಹಿತಿ ಇಲ್ಲ, ಎಲ್ಲರಿಗೂ ಎಲ್ಲಿ ದೂರು ಕೊಡಬೇಕು ಅನ್ನುವ ಬಗ್ಗೆಯೂ ಗೊತ್ತಿಲ್ಲ. ಹೀಗಾಗಿ ಅದಕ್ಕಾಗಿ ಒಂದು ವಾರ್ ರೂಮ್ ರಚನೆ ಮಾಡುತ್ತೇವೆ, ಯಾರಿಗೆ ಸಮಸ್ಯೆ ಇದೆ ಅವರು ಈ 9035675734 ನಂಬರ್ ಗೆ ವಾಟ್ಸಪ್ ಮೂಲಕ ದೂರು ಕೊಡಬಹುದು. ಇದರ ಜೊತೆಗೆ ನಮ್ಮ ಯಾವುದೇ ನಾಯಕರಿಗೆ ಮಾಹಿತಿ ನೀಡಲು ಅವಕಾಶ ಇದೆ. ಯತ್ನಾಳ್ ಅವರ ನೇತೃತ್ವದಲ್ಲಿ ನಾವೆಲ್ಲರೂ ಬೀದರ್ ನಿಂದ ಜನಜಾಗೃತಿ ಅಭಿಯಾನ ಆರಂಭ ಮಾಡುತ್ತೇವೆ ಎಂದರು.
ಬಳಿಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ರಾಜ್ಯದಲ್ಲಿ ಮೊದಲಿಗೆ 1 ಲಕ್ಷ ಎಕರೆ ಜಮೀನು ನಮ್ಮದಿದೆ ಎಂದರು, ಈಗ 6 ಲಕ್ಷ ಎಕರೆ ಭೂಮಿ ವಕ್ಫ್ ಗೆ ತೆಗೆದುಕೊಳ್ಳಲು ಕ್ಲೈಮ್ ಮಾಡಿದ್ದಾರೆ. ಇಡೀ ದೇಶದಲ್ಲಿ 38 ಲಕ್ಷ ಎಕರೆ ಜಮೀನು ನಮ್ಮದಿದೆ ಎಂದು ಹೇಳ್ತಿದ್ದಾರೆ. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಹೈದರಾಬಾದ್ ನಲ್ಲಿ ಸಮಾವೇಶ ಮಾಡ್ತಿದ್ದಾರೆ. ಅದಕ್ಕಾಗಿ ನಾವು ಲೀಗಲ್ ಟೀಂ ಮೂಲಕ ಹೋರಾಟ ಮಾಡ್ತಿದ್ದೇವೆ. ಅದರ ಜೊತೆಗೆ ರಾಜ್ಯದ ಜನರಿಗೆ ಜನಜಾಗೃತಿ ಅಭಿಯಾನ ಮಾಡ್ತಿದ್ದೇವೆ.
ರಾಜ್ಯ ಸರ್ಕಾರದ ಜಮೀರ್ ಅಹ್ಮದ್ ಖಾನ್ ಬೆದರಿಕೆ ಹಾಕುವ ಕೆಲಸ ಮಾಡ್ತಿದ್ದಾರೆ. ನಮನ್ನ ಸೈತಾನ್ ಗೆ ಹೋಲಿಸುತ್ತಿದ್ದಾರೆ. ಅಧಿಕಾರಿಗಳಿಗೆ ದಮ್ಕಿ ಹಾಕುತ್ತಿದ್ದಾರೆ, ಸಿಎಂ ನನಗೆ ಹೇಳಿದ್ದಾರೆ ಎಂದು ಹೇಳ್ತಿದ್ದಾರೆ.ಹೀಗಾಗಿ ಅಧಿಕಾರಿಗಳು ಜಮೀರ್ ಬೆದರಿಕೆಗೆ ಬೆಚ್ಚಿ ಬಿದ್ದಿದ್ದಾರೆ. ಕೆಲವೊಂದಿಷ್ಟು ಮುಸ್ಲಿಂ ಸಮುದಾಯ ಕೂಡ ವಿರೋಧ ಮಾಡಿದೆ, ವಿಜಯಪುರ, ಧಾರವಾಡದಲ್ಲಿ ವಿರೋಧಿಸಿ ಧ್ವನಿ ಎತ್ತಿದ್ದಾರೆ. ಈ ಟ್ರಿಬ್ಯೂನಲ್ ರದ್ದು ಆಗಬೇಕು, ಬಿಜೆಪಿ ಕಾಲದನ್ನು ನಾವು ಸಮರ್ಥನೆ ಮಾಡಲ್ಲ, ಯಡಿಯೂರಪ್ಪ, ಬೊಮ್ಮಾಯಿ ಮಾಡಿದ್ದಾರೆ ಎಂದು ಸಮರ್ಥನೆ ಮಾಡಲ್ಲ ಎಂದು ಯತ್ನಾಳ್ ಗುಡುಗಿದ್ದಾರೆ.