ʻಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಬ್ಬ ಅಪ್ರಬುದ್ಧ ರಾಜಕಾರಣಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ವರ್ಗಾವಣೆ ಸೇರಿದಂತೆ ಹಲವು ಹಗರಣ ನಡೆಸಿದ್ದಾರೆ. ಅವರ ಹಗರಣಗಳನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪದೇಪದೇ ಪರಿಶಿಷ್ಟರ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ಬಗ್ಗೆ ಅವರು ಮಾತನಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದಾರೆ.
ವಿಜಯೇಂದ್ರ ನಡೆಸಿರುವ ಹಗರಣಗಳ ಬಗ್ಗೆ ಬಿಜೆಪಿಗೂ ಗೊತ್ತಿದೆ. ಅವರ ತಂದೆ ಬಿ.ಎಸ್.ವೈ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದ್ದರು ಎಂಬುದು ಗೊತ್ತಿದೆ. ಅಂತಾರಾಷ್ಟ್ರೀಯ ಮಟ್ಟದಿಂದ ಹಣ ವರ್ಗಾವಣೆಯಾಗಿರುವುದು ಸೇರಿದಂತೆ ಅನೇಕ ವಿಚಾರಗಳಿವೆ. ಅವರ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ ಎಂಬುದು ಹೊರಬರಬೇಕಿದೆ ಎಂದು ಟೀಕಿಸಿದರು. ಮುಡಾ ಹಗರಣಗಳನ್ನು ಮಾಡಿರುವುದೇ ಬಿಜೆಪಿ. ನಮ್ಮ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರಿಗೂ ಈ ಅಕ್ರಮಕ್ಕೂ ಸಂಬಂಧವಿಲ್ಲ. ಮುಡಾದವರು ಸಿದ್ದರಾಮಯ್ಯ ಅವರ ಜಮೀನನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ಮುಖ್ಯಮಂತ್ರಿಗಳ ಕುಟುಂಬದವರು ಮುಡಾದಿಂದ ಪರಿಹಾರ ಪಡೆಯಲು ಅರ್ಹರಾಗಿದ್ದು, ಕಾನೂನು ರೀತಿ ಪರಿಹಾರ ಪಡೆದಿದ್ದಾರೆ ಎಂದು ಶಿವಕುಮಾರ್ ಸಮರ್ಥಿಸಿಕೊಂಡರು.