ಮುಡಾ ಹಗರಣದ ವಿರುದ್ಧದ ಬಿಜೆಪಿ-ಜೆಡಿಎಸ್ ನ ʻಮೈಸೂರು ಚಲೋʼ ಪಾದಯಾತ್ರೆ ಮುಕ್ತಾಯಗೊಂಡಿರುವ ಬೆನ್ನ ಹಿಂದೆಯೇ ಬಿಜೆಪಿಯ ಅತೃಪ್ತ ನಾಯಕರು ಬಳ್ಳಾರಿ ಯಾತ್ರೆಗೆ ಮುಂದಾಗಿದ್ದಾರೆ. ಸೆಪ್ಟೆಂಬರ್ 17 ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಉದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ನಗರದ ಹೊರ ವಲಯದಲ್ಲಿರುವ ಖಾಸಗಿ ರೆಸಾರ್ಟ್ವೊಂದರಲ್ಲಿ ಭಾನುವಾರ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಅರವಿಂದ ಲಿಂಬಾವಳಿ, ಪ್ರತಾಪ ಸಿಂಹ, ಕುಮಾರ ಬಂಗಾರಪ್ಪ ಸೇರಿ 12 ನಾಯಕರು ರಹಸ್ಯ ಸಭೆ ನಡೆಸಿದರು. ಪಾದಯಾತ್ರೆ ವೇಳೆ ಕಾಂಗ್ರೆಸ್ನ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ವಿರುದ್ಧ ಹೋರಾಟ ನಡೆಸಲು ಚರ್ಚಿಸಲಾಗಿದೆ.