ನಮ್ಮ ಮೆಟ್ರೋ ಬೆಂಗಳೂರಿಗರಿಗೆ ಜೀವನಾಡಿ. ನಗರದ ಟ್ರಾಫಿಕ್ ತಪ್ಪಿಸಿಕೊಳ್ಳಲು ಪ್ರಯಾಣಿಕರು ಸಾಧ್ಯವಿದ್ದಲ್ಲೆಲ್ಲ ನಮ್ಮ ಮೆಟ್ರೋ ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಹೊಸ ಮೆಟ್ರೋ ಕಾಮಗಾರಿ ಬೇಗ ಮುಗಿಸಿ ಮತ್ತಷ್ಟು ಅನುಕೂಲ ಮಾಡಿಕೊಡಿ ಎಂದು ಮನವಿಗಳು ಕೇಳಿ ಬರುತ್ತಿವೆ. ಆದರೆ ಈಗ, ಮೆಟ್ರೋ ನಿರೀಕ್ಷೆಯಲ್ಲಿದ್ದ ವಿಮಾನ ನಿಲ್ದಾಣ ರಸ್ತೆಯ ಜನರಿಗೆ BMRCL ಶಾಕಿಂಗ್ ನ್ಯೂಸ್ ನೀಡಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಬೇಸರ ಹೊರ ಹಾಕುತ್ತಿದ್ದಾರೆ.
ಸಿಲ್ಕ್ ಬೋರ್ಡ್ನಿಂದ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗದ ನಮ್ಮ ಮೆಟ್ರೋ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಮಗಾರಿ ಯಾವಾಗ ಮುಗಿಯುತ್ತದೆಯೋ, ಸಂಚಾರ ಯಾವಾಗ ಆರಂಭವಾಗುತ್ತದೆಯೋ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಬಿಎಂಆರ್ಸಿಎಲ್ ಇದೀಗ ಚಿಕ್ಕಜಾಲ ಮತ್ತು ಬೆಟ್ಟದ ಹಲಸೂರು ಎರಡು ಮೆಟ್ರೋ ಸ್ಟೇಷನ್ಗಳನ್ನು ಕೈಬಿಡಲು ಮುಂದಾಗಿದೆ.
ಚಿಕ್ಕಜಾಲ ಮತ್ತು ಬೆಟ್ಟದ ಹಲಸೂರು ನಿಲ್ದಾಣಗಳಿಗಾಗಿ ಈ ಭಾಗದ ಹಲವು ಕಂಪನಿಗಳು ಹಣ ಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಈಗ ಕಂಪನಿಗಳು ಹಣ ಕೊಡಲು ಮುಂದೆ ಬರುತ್ತಿಲ್ಲ. ಬಿಎಂಆರ್ಸಿಎಲ್ಗೆ ಈ ಎರಡು ಸ್ಟೇಷನ್ಗಳನ್ನು ನಿರ್ಮಾಣ ಮಾಡಬೇಕಾದರೆ 300 ಕೋಟಿ ರೂಪಾಯಿಯಷ್ಟು ಹಣಕಾಸಿನ ಅವಶ್ಯಕತೆ ಇದೆ ಎನ್ನಲಾಗಿದೆ. ಇದಕ್ಕಾಗಿ ಮತ್ತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಸದ್ಯ ಎರಡು ಸ್ಟೇಷನ್ ಕಾಮಗಾರಿಯನ್ನು ಕೈಬಿಡಲಿದ್ದೇವೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌವ್ಹಾಣ್ ತಿಳಿಸಿದ್ದಾರೆ.