ಬಿಎಂಟಿಸಿ ಬಸ್ಗಳಲ್ಲಿ ಕಳೆದ 3 ತಿಂಗಳಿನಿಂದ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 8,891 ಪ್ರಯಾಣಿಕರಿಂದ ನಿಗಮದ ತನಿಖಾ ತಂಡ 17.96 ಲಕ್ಷ ರುಪಾಯಿ ದಂಡ ವಸೂಲಿ ಮಾಡಿದೆ. ಬಿಎಂಟಿಸಿ ಬಸ್ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಾ ನಿಗಮದ ಆದಾಯ ಸೋರಿಕೆಯಾಗುವಂತೆ ಮಾಡುವ ಪ್ರಯಾಣಿಕರನ್ನು ಪತ್ತೆ ಮಾಡಲು ನಿಗಮದ ತನಿಖಾ ತಂಡ ನಿಯಮಿತವಾಗಿ ಬಸ್ಗಳನ್ನು ತಪಾಸಣೆ ನಡೆಸುತ್ತದೆ.
ಅದರಂತೆ ಕಳೆದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಒಟ್ಟು 57,219 ಟ್ರಿಪ್ಗಳನ್ನು ತಪಾಸಣೆ ನಡೆಸಿ 8,891 ಟಿಕೆಟ್ ಪ್ರಯಾಣಿಕರನ್ನು ಪತ್ತೆ ಮಾಡಿದೆ. ಅಲ್ಲದೆ, ಆ ಪ್ರಯಾಣಿಕರಿಂದ ಟಿಕೆಟ್ ದರವನ್ನು ವಸೂಲಿ ಮಾಡುವುದರ ಜತೆಗೆ ಟಿಕೆಟ್ ರಹಿತ ಪ್ರಯಾಣಕ್ಕಾಗಿ 17.96 ಲಕ್ಷ ರುಪಾಯಿ ದಂಡ ವಸೂಲಿ ಮಾಡಿದೆ. ಅಲ್ಲದೆ, ಪ್ರಯಾಣಿಕರಿಗೆ ಟಿಕೆಟ್ ನೀಡುವಲ್ಲಿ ವಿಫಲವಾದ ನಿರ್ವಾಹಕರ ವಿರುದ್ಧ 5,268 ಪ್ರಕರಣ ದಾಖಲಿಸಲಾಗಿದೆ.
ಅದರೊಂದಿಗೆ ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟಿದ್ದ ಆಸನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 1,178 ಪುರುಷ ಪ್ರಯಾಣಿಕರನ್ನು ಪತ್ತೆ ಮಾಡಲಾಗಿದ್ದು, ಅವರ ವಿರುದ್ದ ಮೋಟಾರು ವಾಹನ ಕಾಯ್ದೆ 1988ರ ಅಡಿ ಯಲ್ಲಿ 1.17 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಒಟ್ಟಾರೆ 3 ತಿಂಗಳಲ್ಲಿ ಬಿಎಂಟಿಸಿಗೆ ದಂಡ ವಸೂಲಿ ರೂಪದಲ್ಲಿ 19.13 ಲಕ್ಷ ಆದಾಯ ಬಂದಿದೆ.