ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು, ಬಾಲಿವುಡ್ ಗೆ ಬಹುದೊಡ್ಡ ಕೊಡುಗೆ ನೀಡಿರೋ ಅನುರಾಗ್ ಕಶ್ಯಪ್, ಅದ್ಯಾಕೋ ಬಾಲಿವುಡ್ ತೊರೆಯೋ ಮಾತುಗಳನ್ನಾಡಿದ್ದಾರೆ. ನಂಗೆ ಹಿಂದಿ ಚಿತ್ರರಂಗ ಅಸಹ್ಯ ಅನಿಸ್ತಿದೆ. ನಾನು ಪರ್ಮನೆಂಟ್ ಆಗಿ ಸೌತ್ ಗೆ ಶಿಫ್ಟ್ ಆಗಿಬಿಡ್ತೀನಿ ಅಂತಲೂ ಮಾತನಾಡಿದ್ದಾರೆ. ಹೌದು.. ದಿ ಹಾಲಿವುಡ್ ರಿಪೋರ್ಟರ್ ಗೆ ನೀಡಿರೋ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್, ತಾನು ಕೆಲಸ ಮಾಡೋ ಹಿಂದಿ ಚಿತ್ರರಂಗದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೌತ್ ಡೈರೆಕ್ಟರ್ ಗಳಾದ ರಾಮ್ ಗೋಪಾಲ್ ವರ್ಮಾ ಹಾಗೂ ಶಂಕರ್ ಗರಡಿಯಲ್ಲಿ ಪಳಗಿದ ಅನುರಾಗ್ ಕಶ್ಯಪ್, ಒಳ್ಳೆಯ ಬರಹಗಾರನಾದರು. ನಂತ್ರ RGV ಸೂಚನೆಯಂತೆ ಉಪೇಂದ್ರ ಅವ್ರ A ಮತ್ತು ಓಂ ಸಿನಿಮಾಗಳನ್ನ ನೋಡಿ, ಅವುಗಳಿಂದ ಸಿಕ್ಕಾಪಟ್ಟೆ ಪ್ರಭಾವಿತರಾದರಂತೆ. ಅಷ್ಟೇ ಅಲ್ಲದೆ, ಉಪೇಂದ್ರ ಅವ್ರನ್ನ ಹುಡುಕಿಕೊಂಡು ಮಂಗಳೂರುವರೆಗೂ ತೆರಳಿ, ಅವರ ಸಿನಿಮಾ ಶೂಟಿಂಗ್ ಸೆಟ್ ಗಳನ್ನ ಅವಲೋಕಿಸುತ್ತಿದ್ದರಂತೆ. ಆ ಮೂಲಕವೇ ನನ್ನ ಸೌತ್ ಎಂಟ್ರಿ ಆಗಿತ್ತು ಅಂತ ನಮ್ಮ ಟ್ರೆಂಡ್ ಸೆಟ್ಟರ್ ಉಪೇಂದ್ರ ಅವರನ್ನ ಕೊಂಡಾಡಿದ್ದಾರೆ.
ಇನ್ನೂ ಸೌತ್ ಸೂಪರ್ ಸ್ಟಾರ್ ಹಾಗೂ ಮೆಗಾಸ್ಟಾರ್ ಗಳಾದ ರಜನೀಕಾಂತ್ ಹಾಗೂ ಚಿರಂಜೀವಿ ಸಿನಿಮಾಗಳ ಹಿಂದಿ ಡಬ್ ವರ್ಷನ್ ನ ನೋಡ್ತಿದ್ದೆ ಅಂತಲೂ ಹೇಳಿದ್ದಾರೆ. ನಯನತಾರಾ ನಟನೆಯ ಇಮೈಕ್ಕಾ ನೋಡಿಗಳ್ ಸಿನಿಮಾ ಹಾಗೂ ಇತ್ತೀಚೆಗೆ ತೆರೆಕಂಡ ವಿಜಯ್ ಸೇತುಪತಿ ಜೊತೆಗಿನ ಮಹಾರಾಜ ಅನ್ನೋ ತಮಿಳು ಚಿತ್ರಗಳಲ್ಲಿ ನಟಿಸಿದ್ರು ಅನುರಾಗ್ ಕಶ್ಯಪ್. ಒಟ್ಟಾರೆಯಾಗಿ ಸೌತ್ ಸಿನಿಮಾಗಳ ತಂತ್ರಜ್ಞರು, ಕಂಟೆಂಟ್, ಮೇಕಿಂಗ್, ಶಿಸ್ತು, ಕ್ರಿಯೇಟಿವಿಟಿ, ವೈವಿಧ್ಯಮಯಗಳಿಂದ ಅಕ್ಷರಶಃ ಪ್ರಭಾವಿತರಾಗಿದ್ದಾರೆ ಅನುರಾಗ್ ಕಶ್ಯಪ್. ಇತ್ತೀಚೆಗೆ ಸಂಸದೆ ಕಮ್ ಬಾಲಿವುಡ್ ಕ್ವೀನ್ ಕಂಗನಾ ರಣಾವತ್, ನಮ್ಮ ಬಾಲಿವುಡ್ ಮಂದಿಗೆ ಬೀಚ್ ಹಾಗೂ ಹೀರೋಯಿನ್ಸ್ ಬಿಟ್ರೆ ಬೇರೇನೂ ಗೊತ್ತಿಲ್ಲ ಅಂತ ಬಿಟೌನ್ ಕಾಲೆಳೆದಿದ್ರು. ಇದೀಗ ಬಿಟೌನ್ ಗೆ ಗುಡ್ ಬೈ ಹೇಳಿ, ಸೌತ್ ಗೆ ಬಂದು ಸೆಟಲ್ ಆಗುವ ಮಾತುಗಳನ್ನಾಡಿದ್ದಾರೆ ಅನುರಾಗ್ ಕಶ್ಯಪ್. ಇದನ್ನ ಕಂಡು ಸೌತ್ ಮಂದಿ ವೆಲ್ಕಮ್ ಟು ಸೌತ್ ಅಂತ ಕಶ್ಯಪ್ ಗೆ ಸ್ವಾಗತ ಕೋರುತ್ತಿದ್ದಾರೆ.