ಬಾಲಿವುಡ್ ನಟ ಸೈಫ್ ಅಲಿ ಖಾನ್ ನಿವಾಸಕ್ಕೆ ದರೋಡೆಕೋರನೊಬ್ಬ ನುಗ್ಗಿದ್ದು ನಟನಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಇದರ ಪರಿಣಾಮವಾಗಿ ಸೈಫ್ ಅಲಿ ಖಾನ್ ಗಾಯಗೊಂಡಿದ್ದಾರೆ. ಈ ಘಟನೆ ಇಂದು ಗುರುವಾರ ನಸುಕಿನ ಜಾವದಲ್ಲಿ ನಡೆದಿದೆ. ಬೆಳಗಿನ ಜಾವ 2:30 ರ ಸುಮಾರಿಗೆ ನಟ ಸೈಫ್ ಅಲಿ ಖಾನ್ ತಮ್ಮ ಮನೆಯಲ್ಲಿ ಮಲಗಿದ್ದಾಗ ಕಳ್ಳ ನುಗ್ಗಿದ್ದು ಚಾಕುವಿನಿಂದ ಇರಿದಿದ್ದಾನೆ.
ಈ ಘಟನೆ ವೇಳೆ ಮನೆಯಲ್ಲಿದ್ದವರು ಎಚ್ಚರಗೊಂಡಿದ್ದಾರೆ. ಏನಾಗಿದೆ ಎನ್ನುವಷ್ಟರಲ್ಲಿ ಕಳ್ಳ ಪರಾರಿ ಆಗಿದ್ದಾನೆ. ಈ ಘಟನೆ ಸಂಬಂಧ ಬಾಂದ್ರಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕಳ್ಳನನ್ನು ಹಿಡಿಯಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸದ್ಯ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ. ಕಳ್ಳನೊಂದಿಗೆ ಗಲಾಟೆಯಲ್ಲಿ ಅವರಿಗೆ ಇರಿತವಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಕಳ್ಳರು 2- 3 ಬಾರಿ ಹಲ್ಲೆ ಮಾಡಿದ್ದಾರೆ. ನಾವು ಇದನ್ನು ತನಿಖೆ ನಡೆಸುತ್ತಿದ್ದೇವೆ. ಮುಂಬೈ ಕ್ರೈಮ್ ಬ್ರ್ಯಾಂಚ್ ಕೂಡ ತನಿಖೆ ನಡೆಸುತ್ತಿದೆ. ಮುಂಜಾನೆ 3 ಗಂಟೆಗೆ ಸೈಫ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಸುಮಾರು ಆರು ಗಾಯಗಳಾಗುದ್ದು, ಎರಡು ಕಡೆ ಗಂಭೀರವಾಗಿ ತುಂಬಾ ಆಳವಾಗಿ ಗಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒಂದು ಗಾಯ ಅವರ ಬೆನ್ನುಮೂಳೆಯ ಹತ್ತಿರದಲ್ಲಿದೆ. ನಾವು ಅವರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದೇವೆ. ನರ ಶಸ್ತ್ರ ಚಿಕಿತ್ಸಕ ನಿತಿನ್ ಡಾಂಗೆ, ಕಾಸ್ಮಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞ ನಿಶಾ ಗಾಂಧಿ ಅವರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ, ಶಸ್ತ್ರಚಿಕಿತ್ಸೆಯ ನಂತರವೇ ಸೈಫ್ ಅಲಿ ಖಾನ್ ಗೆ ಆಗಿರುವ ಹಾನಿಯ ಪ್ರಮಾಣವನ್ನು ನಿಮಗೆ ತಿಳಿಸಲಾಗುವುದು ಎಂದು ಲೀಲಾವತಿ ಆಸ್ಪತ್ರೆಯ ವೈದ್ಯರಾದ ಡಾ. ಉತ್ತಮಣಿ ಮಾಹಿತಿ ಹಂಚಿಕೊಂಡಿದ್ದಾರೆ.