ದೀಪಾವಳಿ ಹೊತ್ತಲ್ಲಿ ತೀವ್ರ ಏರಿಕೆ ಕಂಡಿದ್ದ ಚಿನ್ನದ ದರವು ಈಗ ಇಳಿಕೆಯ ಹಾದಿ ಹಿಡಿದಿದೆ. ಕಳೆದ ಹತ್ತು ದಿನದಲ್ಲಿ ಪ್ರತಿ 10 ಗ್ರಾಂಗೆ 4,750 ರೂ. ಗಳಷ್ಟು ದರ ಇಳಿಕೆಯಾಗಿದ್ದು, ಈ ಟ್ರೆಂಡ್ ಮದುವೆ ಋತುವಿನಲ್ಲಿ ಗ್ರಾಹಕರಿಗೆ ಖುಷಿ ಕೊಡಲಿದೆ. ಒಂದರ್ಥದಲ್ಲಿ ಇದು ಭಾರತೀಯರ ಪಾಲಿಗೆ ಸಂತಸದ ವಿಚಾರವಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ ಡಾಲರ್ ಮೌಲ್ಯ ಏರಿಕೆ ಕಾಣುತ್ತಿದೆ. ತೈಲ ಪೂರೈಕೆಗೆ ಉತ್ತೇಜನ, ಚೀನೀ ಸರಕುಗಳ ಮೇಲಿನ ಸುಂಕಗಳು ಮತ್ತು ಕಟ್ಟುನಿಟ್ಟಾದ ವಲಸೆ ಕಾನೂನುಗಳಂತಹ ಟ್ರಂಪ್ ಅವರ ದೇಶೀಯ ನೀತಿಗಳು ಅಮೆರಿಕದ ಬಲವಾದ ಆರ್ಥಿಕತೆಗೆ ಕಾರಣವಾಗಬಹುದು. ಅದರ ಪರಿಣಾಮ ಡಾಲರ್ ಮೌಲ್ಯ ಇನ್ನಷ್ಟು ವೃದ್ಧಿಸಬಹುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಒತ್ತಡಕ್ಕೆ ಸಿಲುಕಬಹುದು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿವೆ. ರಷ್ಯಾ-ಉಕ್ರೇನ್ ಸಮರ ಕೊನೆಗೊಳ್ಳುವ ನಿರೀಕ್ಷೆ ಹೆಚ್ಚಿದೆ. ಬಿಟ್ ಕಾಯಿನ್ ಬೆಲೆಗಳೂ ನಿರಂತರವಾಗಿ ಏರಿಕೆ ಕಾಣುತ್ತಿವೆ. ಅಲ್ಲಿ ಹೂಡಿಕೆದಾರರ ಆಕರ್ಷಣೆ ಹೆಚ್ಚಿದ್ದು, ಸುರಕ್ಷಿತ ಹೂಡಿಕೆ ಎಂಬ ಚಿನ್ನದ ಮೇಲಿನ ಮೋಹ ಕಡಿಮೆಯಾಗುತ್ತಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿಯ ದರಗಳು ಕುಸಿತ ಕಾಣುತ್ತಿವೆ.
ಈ ಮದುವೆಯ ಋತುವಿನ ಪ್ರಾರಂಭದಲ್ಲಿ ಚಿನ್ನದ ಬೆಲೆಗಳು ಕುಸಿದಿವೆ. ಅಮೆರಿಕ ಚುನಾವಣಾ ಫಲಿತಾಂಶದ ಬಳಿಕ ಚಿನ್ನದ ದರದಲ್ಲಿ 6% ಕುಸಿತವಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಮದುವೆಯ ಋತುವಿನ ಸಂದರ್ಭದಲ್ಲಿ ಚಿನ್ನದ ಬೇಡಿಕೆಯು ಗಗನಕ್ಕೇರುತ್ತದೆ. ಹೀಗಾಗಿ ಈ ಬೆಲೆ ಇಳಿಕೆಯು ಚಿನ್ನದ ಖರೀದಿದಾರರ ಹರ್ಷವನ್ನು ವೃದ್ಧಿಸಿದೆ. ಬೆಲೆಗಳು ಮತ್ತಷ್ಟು ಕಡಿಮೆಯಾಗಬಹುದು ಎಂಬುದು ತಜ್ಞರ ಅಂದಾಜು.