ಕೇಂದ್ರ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿಯನ್ನು ಖಂಡಿಸಿ ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕರೆಯಲಾಗಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 2024-25ರ ಸಾಲಿನ ಬಜೆಟ್ ನೋಡಿದ ನಂತರ ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸವೇ ಹೊರಟುಹೋಗಿದೆ. ಬಜೆಟ್ ನಲ್ಲಿ ರೈತರ ಕಲ್ಯಾಣದ ಕಾಳಜಿ ವ್ಯಕ್ತಪಡಿಸಿರುವ ಹಣಕಾಸುವ ಸಚಿವರು ನಮ್ಮ ಬಹುದಿನಗಳ ಬೇಡಿಕೆಯಾಗಿರುವ ಮೇಕೆದಾಟು ಯೋಜನೆಯ ಬಗ್ಗೆ ಪ್ರಸ್ತಾವವನ್ನೇ ಮಾಡಿಲ್ಲ. ಭದ್ರಾ ಮೇಲ್ದಂಡೆಗೆ ವಿಶೇಷ ನೆರವು ನೀಡುವ ತಮ್ಮದೇ ಭರವಸೆಯನ್ನೂ ಉಳಿಸಿಕೊಳ್ಳಲಿಲ್ಲ. ಕಳಸಾ -ಬಂಡೂರಿ ಯೋಜನೆಯನ್ನೂ ನಿರ್ಲಕ್ಷಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಮೆಟ್ರೋ 3ನೇ ಹಂತದ ಯೋಜನೆ ಮತ್ತು ಬೆಂಗಳೂರು ನಗರದ ಉದ್ದೇಶಿತ ಅಷ್ಟಪಥ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಅಗತ್ಯ ಅನುಮತಿ ಮತ್ತು ಅನುದಾನವನ್ನೂ ನೀಡಿಲ್ಲ ಎಂದು ತಿಳಿಸಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಸೂಚನೆ ಕೂಡಾ ಬಜೆಟ್ ನಲ್ಲಿ ಇಲ್ಲ. ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಸೂಕ್ಷ್ಮವಾಗಿ ಅವಲೋಕಸಿದರೆ ಬಿಜೆಪಿಯನ್ನು ತಿರಸ್ಕರಿಸಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ನರೇಂದ್ರ ಮೋದಿ ಅವರ ಸರ್ಕಾರ ನಿರ್ಧಾರ ಮಾಡಿದಂತಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿವೆ ಎನ್ನುವುದನ್ನು ನರೇಂದ್ರ ಮೋದಿ ಸರ್ಕಾರ ಮರೆತಂತಿದೆ. ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸುರಿದಿರುವ ವಿಶೇಷ ಅನುದಾನದ ಸುರಿಮಳೆಯನ್ನು ನೋಡಿದರೆ ನರೇಂದ್ರ ಮೋದಿಯವರ ಲೆಕ್ಕಾಚಾರದಲ್ಲಿ ಆ ಎರಡು ರಾಜ್ಯಗಳು ಮಾತ್ರ ಅಸ್ತಿತ್ವದಲ್ಲಿರುವ ಹಾಗೆ ಕಾಣುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದಿದ್ದಾರೆ.
ಈ ಅನ್ಯಾಯವನ್ನು ಸಹಿಸಲಾಗದು. ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿರುವ ಬಿಜೆಪಿಯೇತರ ಪಕ್ಷಗಳ ಆಡಳಿತದ ರಾಜ್ಯಗಳ ಜೊತೆ ಸೇರಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಸೇಡಿನ ರಾಜಕಾರಣದ ವಿರುದ್ಧ ಹೋರಾಟ ನಡೆಸಲಾಗುವುದು. ಈ ಹೋರಾಟದಲ್ಲಿ ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ನಿಲುವಿನ ಬಗ್ಗೆ ಅಸಮಾಧಾನಗೊಂಡಿರುವ ರಾಜ್ಯದ ಜನತೆ ನಮ್ಮ ಜೊತೆ ನಿಲ್ಲಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಅವರು ತಿಳಿಸಿದ್ದಾರೆ.