ಕಲಬುರಗಿಯ ನಂತರ ರಾಜ್ಯದ ಬೇರೆ ಬೇರೆ ನಗರಗಳಲ್ಲೂ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕಲಬುರಗಿಯಲ್ಲಿ ಸೆಪ್ಟೆಂಬರ್ 17ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಮಾರು 55 ವಿಷಯಗಳು ಚರ್ಚೆಯಾಗಿ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ.
ಸಂಪುಟ ಸಭೆ ಮುಗಿದ ನಂತರ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಆದರೆ ಆ ಕಾರ್ಯಕ್ರಮ ಅದೇ ದಿನ ನಡೆಸಬೇಕೆ ಅಥವಾ ಬೇರೆ ದಿನ ಮಾಡಬೇಕೆ ಎಂಬ ಬಗ್ಗೆ ಇನ್ನೂ ಗೊಂದಲಗಳಿವೆ. ಒಂದೆರಡು ದಿನಗಳಲ್ಲಿ ದಿನಾಂಕ ನಿಗದಿಯಾಗಲಿದೆ. ಕಲಬುರಗಿಯ ನಂತರ ಕಿತ್ತೂರು ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ ಬೆಳಗಾವಿ ಅಥವಾ ಧಾರವಾಡ, ಕರಾವಳಿ ಭಾಗದ ಮಂಗಳೂರು ಹಾಗೂ ಮುಖ್ಯಮಂತ್ರಿ ತವರು ಮೈಸೂರಿನಲ್ಲಿಯೂ ಸಚಿವ ಸಂಪುಟ ಸಭೆ ನಡೆಸಬೇಕು ಎಂಬುದು ಸರ್ಕಾರದಲ್ಲಿ ನಡೆದಿರುವ ಚರ್ಚೆಯಾಗಿದೆ.