ಕೆನಡಾ ಸಚಿವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಡಿರುವ ಆರೋಪಗಳ ಹಿನ್ನೆಲೆ ಕೆನಡಾದ ರಾಜತಾಂತ್ರಿಕರಿಗೆ ಭಾರತ ಸಮನ್ಸ್ ನೀಡಿದೆ.
ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಖಲಿಸ್ತಾನಿ ಉಗ್ರರನ್ನು ಗುರಿಯಾಗಿಸಲು ಆದೇಶಿಸಿದ್ದಾರೆ ಎಂಬ ಕೆನಡಾದ ಸಚಿವರು ನೀಡಿದ್ದ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ. ಅಸಂಬದ್ಧ ಮತ್ತು ಆಧಾರರಹಿತ ಹೇಳಿಕೆ ಎಂದು ಖಂಡಿಸಿದೆ.
ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಮಾತನಾಡಿ, ದೇಶದ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಸ್ಥಾಯಿ ಸಮಿತಿಯ ಸದಸ್ಯರಿಗೆ ಅಮಿತ್ ಶಾ ಅವರು ಖಲಿಸ್ತಾನಿ ಉಗ್ರರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣೆಯ ಅಭಿಯಾನಕ್ಕೆ ಆದೇಶಿಸಿದ್ದಾರೆ ಎಂದು ಆರೋಪಿಸಿದ್ದರು.
ಸಮಿತಿಯ ಮುಂದೆ ಭಾರತದ ಕೇಂದ್ರ ಗೃಹ ಸಚಿವರಿಗೆ ಮಾಡಿದ ಅಸಂಬದ್ಧ ಮತ್ತು ಆಧಾರರಹಿತ ಉಲ್ಲೇಖಗಳಿಗೆ ಭಾರತ ಸರ್ಕಾರವು ತೀವ್ರವಾಗಿ ಪ್ರತಿಭಟಿಸುತ್ತದೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.