ಭಾರತದ ಜೊತೆ ರಾಜತಾಂತ್ರಿಕ ಸಂಘರ್ಷ ಉಲ್ಬಣಗೊಂಡಿರುವ ಬೆನ್ನಲ್ಲೇ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕುರ್ಚಿಗೆ ಕುತ್ತು ಬರುವ ಲಕ್ಷಣ ಕಂಡುಬರುತ್ತಿದೆ. ಆಡಳಿತಾರೂಢ ಪಕ್ಷವಾದ ಲಿಬರಲ್ ಪಾರ್ಟಿಯ ಸಂಸದರೇ ಪ್ರಧಾನಿ ಟ್ರುಡೊರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಯೋಜನೆ ರೂಪಿಸಿದ್ದಾರೆ. ಪಕ್ಷದ ಆಂತರಿಕ ವಲಯದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಮುಂದಿನ ಕಾಕಸ್ ಸಭೆಯಲ್ಲಿ ಟ್ರುಡೊ ರಾಜೀನಾಮೆಗೆ ಪ್ರಸ್ತಾಪ ಮಂಡಿಸುವ ಸಾಧ್ಯತೆ ಇದೆ.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಲಿಬರಲ್ ಪಕ್ಷವು ತನ್ನ ಭದ್ರಕೋಟೆಯಲ್ಲೇ ಭಾರಿ ಸೋಲುಕಂಡಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣಿ ಮೇಲೆ ಪರಿಣಾಮ ಬೀರಬಹುದು ಎಂಬುದು ಪಕ್ಷದ ಹಿರಿಯ ನಾಯಕರ ಅಭಿಪ್ರಾಯ. ಜೊತೆಗೆ ಟ್ರುಡೊ ವರ್ಚಸ್ಸು ಕುಗ್ಗುತ್ತಿದ್ದು, ಜನರಲ್ಲಿ ಉತ್ತಮ ಅಭಿಪ್ರಾಯ ಇಲ್ಲ ಎಂಬುದು ಪಕ್ಷಕ್ಕೆ ಮನವರಿಕೆಯಾಗಿದೆ. ಇದರಿಂದ ಮುಂದಿನ ಚುನಾವಣೆ ಎದುರಿಸುವುದು ಕಷ್ಟ ಆಗಬಹುದು ಎಂಬುದು ಹಲವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಟ್ರುಡೊ ರಾಜೀನಾಮೆ ಪಡೆಯಲು ಪಕ್ಷದ ಸಂಸದರು ಮುಂದಾಗಿದ್ದಾರೆ ಎನ್ನಲಾಗಿದೆ.