ಬೆಂಗಳೂರು ಟೆಸ್ಟ್ನಲ್ಲಿ ಕಿವೀಸ್ ತಂಡವನ್ನು 402 ರನ್ಗಳಿಗೆ ಆಲೌಟ್ ಮಾಡಿದ್ದ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ದಿಟ್ಟ ಹೋರಾಟ ನೀಡುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ 46 ರನ್ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ತಂಡದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಮೊದಲ ವಿಕೆಟ್ಗೆ 72 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕ ಕೂಡ ಬಾರಿಸಿದರು. ಹಿಟ್ಮ್ಯಾನ್ 63 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಆದರೆ ಅರ್ಧಶತಕ ಸಿಡಿಸಿದ ಕೂಡಲೇ ರೋಹಿತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದರು.
ಭಾರತದ ಇನ್ನಿಂಗ್ಸ್ನ 22 ನೇ ಓವರ್ ಬೌಲ್ ಮಾಡಿದ ಎಜಾಜ್ ಪಟೇಲ್ ಅವರ ಎಸೆತವನ್ನು ರೋಹಿತ್ ಡಿಫೆಂಡ್ ಮಾಡಿಕೊಂಡರು. ಆದರೆ ರೋಹಿತ್ ಶರ್ಮಾ ಅವರ ಬ್ಯಾಟ್ಗೆ ತಗುಲಿ ಕೆಳಕ್ಕೆ ಬಿದ್ದ ಚೆಂಡು ಆ ಬಳಿಕ ವಿಕೆಟ್ನತ್ತ ಹೋಗಲಾರಂಭಿಸಿತು. ಈ ವೇಳೆ ರೋಹಿತ್ ಚೆಂಡನ್ನು ನೋಡುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಸ್ವಲ್ಪ ಸಮಯದೊಳಗೆ ಚೆಂಡು ವಿಕೆಟ್ಗೆ ಬಡಿದು ರೋಹಿತ್ ಬೌಲ್ಡ್ ಆದರು. ಈ ರೀತಿ ವಿಕೆಟ್ ಕಳೆದುಕೊಂಡ ರೋಹಿತ್ ನಿರಾಸೆಯಿಂದ ಪೆವಿಲಿಯನ್ಗೆ ಮರಳಿದರು.