ಕೇಂದ್ರ ಸರ್ಕಾರ ಇದೇ ಸೆಪ್ಟೆಂಬರ್ನಲ್ಲಿ ಜನಗಣತಿ ಕಾರ್ಯ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ಬುಧವಾರ ಹೇಳಿವೆ. ವ್ಯಾಪಕ ಟೀಕೆ ನಂತರ, ತಮ್ಮ ಮೂರನೇ ಅವಧಿಯಲ್ಲಿ ಜನಗಣತಿ ನಡೆಸುವ ಮೂಲಕ ಮಹತ್ವದ ದತ್ತಾಂಶ ಸಂಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ. ಜನಗಣತಿ ಕಾರ್ಯ ಆರಂಭಕ್ಕಾಗಿ ಪ್ರಧಾನಿ ಕಚೇರಿಯಿಂದ ಹಸಿರು ನಿಶಾನೆಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರೀಕ್ಷೆಯಂತೆ, ಮುಂದಿನ ತಿಂಗಳು ಜನಗಣತಿ ಆರಂಭಗೊಂಡಲ್ಲಿ, ಪೂರ್ಣ ಪ್ರಕ್ರಿಯೆ ಮುಗಿಯಲು ಅಂದಾಜು 18 ತಿಂಗಳು ಬೇಕಾಗುತ್ತದೆ ಎಂದು ಈ ವಿಚಾರವಾಗಿ ಮಾಹಿತಿ ಇರುವ ಅಧಿಕೃತ ಎರಡು ಮೂಲಗಳು ಹೇಳಿವೆ. ವರ್ಷಾಂತ್ಯಕ್ಕೆ ಐದು ರಾಜ್ಯಗಳ ವಿಧಾನಸಭೆ ಗಳಿಗೆ ಚುನಾವಣೆಗಳು ನಡೆಯಲಿವೆ. ಹೀಗಾಗಿ, ದೇಶದಾದ್ಯಂತ ಜನಗಣತಿಯನ್ನು ಹೇಗೆ ನಡೆಸಲಾಗುತ್ತದೆ ಎಂಬ ಬಗ್ಗೆ ಪ್ರಶ್ನೆಗಳೂ ಎದುರಾಗಿವೆ. ಜನಗಣತಿಯನ್ನು ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಕೋವಿಡ್–19 ಪಿಡುಗಿನ ಕಾರಣ 2021ರಲ್ಲಿ ನಡೆದಿರಲಿಲ್ಲ.
ಕೋವಿಡ್–19 ಪಿಡುಗು ಕೊನೆಗೊಂಡು ಸಹಜಸ್ಥಿತಿ ಕಂಡುಬಂದಿದ್ದರೂ ಜನಗಣತಿ ನಡೆಸಲು ಸರ್ಕಾರ ಮುಂದಾಗಿರಲಿಲ್ಲ. ಈ ಕಾರ್ಯ ಆರಂಭಿಸುವಲ್ಲಿ ವಿಳಂಬವಾಗುತ್ತಿರುವ ಕುರಿತು ಹಲವು ಆರ್ಥಿಕ ತಜ್ಞರು ಅಸಮಾಧಾನ–ಟೀಕೆ ಹೊರಹಾಕಿದ್ದರು. ಸದ್ಯ ಲಭ್ಯವಿರುವ ದತ್ತಾಂಶಗಳು ಹಾಗೂ ಜಾರಿಯಲ್ಲಿರುವ ಯೋಜನೆಗಳನ್ನು 2011ರ ಜನಗಣತಿ ಪ್ರಕಾರ ಇದ್ದ ಜನಸಂಖ್ಯೆಗೆ ಅನುಗುಣವಾಗಿ ರೂಪಿಸಲಾಗಿದೆ.