ದರ್ಶನ್ ಕೊಲೆ ಕೇಸ್ನಲ್ಲಿ ಬಂಧನವಾಗಿ ಈಗಾಗಲೇ ಎರಡು ತಿಂಗಳು ಕಳೆದಿವೆ. ಬಿಡುಗಡೆಯಾಗಲು ಕನಿಷ್ಟ 2 ತಿಂಗಳು ಬೇಕು ಎನ್ನಲಾಗುತ್ತಿದೆ. ಈ ನಡುವೆ ಕೆಲ ದಿನಗಳ ಹಿಂದೆ ಕೆಲ ದರ್ಶನ್ ಅಭಿಮಾನಿಗಳು, ನಾವು ದರ್ಶನ್ ಹೊರಗೆ ಬರುವವರೆಗೆ ಇನ್ಯಾವ ನಟರ ಸಿನಿಮಾವನ್ನೂ ಸಹ ನೋಡುವುದಿಲ್ಲ ಎಂದಿದ್ದರು. ಇದೀಗ ದರ್ಶನ್ ನಟನೆಯ ಹಳೆಯ ಸೂಪರ್ ಹಿಟ್ ಸಿನಿಮಾ ಮರು ಬಿಡುಗಡೆಗೆ ಸಜ್ಜಾಗಿದೆ.
ದರ್ಶನ್ ನಟನೆಯ ‘ಕರಿಯ’ ಸಿನಿಮಾ ಆಗಸ್ಟ್ 30ರಂದು ಮರು ಬಿಡುಗಡೆ ಆಗುತ್ತಿದೆ. 2003ರ ಜನವರಿ ತಿಂಗಳಲ್ಲಿ ಈ ಸಿನಿಮಾ ಮೊದಲ ಬಾರಿ ಬಿಡುಗಡೆ ಆಗಿತ್ತು. ಖ್ಯಾತ ನಿರ್ದೇಶಕ ಪ್ರೇಮ್ ಅವರ ಮೊದಲ ಸಿನಿಮಾ ಇದು. ದರ್ಶನ್ಗೆ ಸಹ ನಾಯಕನಾಗಿ ಇದು ಐದನೇ ಸಿನಿಮಾ ಮತ್ತು ಮೊದಲ ಬಲು ದೊಡ್ಡ ವಿಜಯ ತಂದುಕೊಟ್ಟ ಸಿನಿಮಾ. ಆಗಿನ ಕಾಲಕ್ಕೆ ಈ ಸಿನಿಮಾ 700 ದಿನಗಳ ಪ್ರದರ್ಶನ ಕಂಡಿತ್ತು. ದರ್ಶನ್ ಅನ್ನು ರೌಡಿಸಂ ಸಿನಿಮಾಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಿಬಿಟ್ಟಿತು.
ಆಗಸ್ಟ್ 30 ರಂದು ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಈ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಕನ್ನಡದಲ್ಲಿ ಈವರೆಗೆ ಬಿಡುಗಡೆ ಆಗಿರುವ ರೌಡಿಸಂ ಕತೆಯುಳ್ಳ ಸಿನಿಮಾಗಳ ಪೈಕಿ ಕೆಲವೇ ಅತ್ಯುತ್ತಮ ಸಿನಿಮಾಗಳಲ್ಲಿ ಇದೂ ಸಹ ಒಂದು. ಸಿನಿಮಾದ ಹಾಡುಗಳು, ಆಕ್ಷನ್, ಸಿನಿಮಾದ ನಿರೂಪಣೆ ಆಗಿನ ಸಮಯಕ್ಕೆ ವಿನೂತನ ಎನಿಸಿತ್ತು. ಅಲ್ಲದೆ ಕೆಲವು ನಿಜವಾದ ರೌಡಿಗಳನ್ನು, ನಿಜವಾದ ರೌಡಿ ಅಡ್ಡಗಳಲ್ಲಿಯೇ ಸಿನಿಮಾದ ಚಿತ್ರೀಕರಣ ಮಾಡಿಸಲಾಗಿತ್ತು.