ಮಂಡಿ ಲೋಕಸಭಾ ಸಂಸದೆ, ನಟಿ ಕಂಗನಾ ರನೌತ್ಗೆ ಕಪಾಳಮೋಕ್ಷ ಮಾಡಿದ ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಜೂನ್ 6 ರಂದು ಚಂಡೀಗಢದ ವಿಮಾನ ನಿಲ್ದಾಣದಲ್ಲಿ ಕಂಗನಾ ಅವರಿಗೆ ಕಪಾಳಮೋಕ್ಷ ಘಟನೆಯ ನಂತರ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿತ್ತು. ಮತ್ತು ಅವರ ವಿರುದ್ಧ ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿತು. ಘಟನೆಯ ನಂತರ ಕುಲ್ವಿಂದರ್ ಕೌರ್ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೂ ದಾಖಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 323 (ಹಲ್ಲೆ) ಮತ್ತು 341 (ರಸ್ತೆ ತಡೆ) ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದರು, ಆದರೆ ಇದನ್ನು ರೈತ ಸಂಘಟನೆಗಳು ವಿರೋಧಿಸಿದ್ದವು.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಕಂಗನಾ ರನೌತ್ ಜೂನ್ 6ರಂದು ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದರು. ಇದೇ ವೇಳೆ ಭದ್ರತಾ ತಪಾಸಣೆಯ ವೇಳೆ ಮಹಿಳಾ ಪೇದೆಯೊಂದಿಗೆ ಸಂಸದೆಯ ವಾಗ್ವಾದ ನಡೆಯಿತು. ಈ ವೇಳೆ ಸಿಐಎಸ್ಎಫ್ ಮಹಿಳಾ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು. ರೈತರ ಚಳುವಳಿಯಲ್ಲಿ ಭಾಗವಹಿಸಿದವರು 100 ರೂಪಾಯಿ ಪಡೆದು ಭಾಗವಹಿಸಿದ್ದಾರೆ ಎಂದು ಕಂಗನಾ ತಿಳಿಸಿದ್ದರು. ಇವರು ಹೇಳಿಕೆ ನೀಡಿದ್ದ ರೈತ ಪ್ರತಿಭಟನೆಯಲ್ಲಿ ಕುಲ್ವಿಂದರ್ ಕೌರ್ ತಾಯಿ ಸಹ ಇದ್ದಳು ಎಂದು ಹೇಳುತ್ತಿರುವ ಮಹಿಳಾ ಕಾನ್ಸ್ಟೆಬಲ್ನ ವೀಡಿಯೊ ವೈರಲ್ ಆಗಿತ್ತು.
ಮಂಡಿ ಸಂಸದೆ ಕಂಗನಾ ರನೌತ್ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಪಂಜಾಬ್ನ ಕಪುರ್ತಲಾ ನಿವಾಸಿ. ಕುಲ್ವಿಂದರ್ ಕೌರ್ 6 ವರ್ಷಗಳ ಹಿಂದೆ ಜಮ್ಮುವಿನಲ್ಲಿ ವಿವಾಹವಾಗಿದ್ದರು. ಅವರ ಪತಿಯೂ ಸಿಐಎಸ್ಎಫ್ನಲ್ಲಿದ್ದಾರೆ. ಇವರು ಚಂಡೀಗಢದಲ್ಲಿ ಎರಡೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.