ಡಿಸಿಎಂ ಡಿಕೆಶಿ ಗನ್ ತೋರಿಸಿ ಸದಾಶಿವ ನಗರದಲ್ಲಿ ವಿಧವೆಯರಿಂದ ನಿವೇಶನ ಕಬ್ಜ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ. ಚನ್ನಪಟ್ಟಣ ಮೈಸೂರು ಚಲೋ ಸಭೆಯಲ್ಲಿ ಇಂದೂ ಕೂಡ ಡಿಕೆಶಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ ಮುಂದುವರೆಸಿದ್ದಾರೆ.
ಗನ್ ಇಟ್ಟು ಸದಾಶಿವನಗರದಲ್ಲಿ ವಿಧವಾ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ, ಕಂಡ ಕಂಡವರ ಆಸ್ತಿಗಳನ್ನು ಸರಣಿಯಾಗಿ ಕಬ್ಜಾ ಮಾಡುತ್ತಿರುವ ವ್ಯಕ್ತಿಯೊಬ್ಬ ನನ್ನ ಆಸ್ತಿ, ನನ್ನ ತಂದೆಯವರ ಆಸ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾಡುತ್ತಿರುವ ಅನಾಚಾರ, ಅಕ್ರಮಗಳ ಬಗ್ಗೆ ಅಜ್ಜಯನ ಮುಂದೆ ಆಗಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನ ಮುಂದೆ ಆಗಲಿ ಪ್ರಮಾಣ ಮಾಡೋಣ. ನೀವೇ ವಿಧಾನಸೌಧಕ್ಕೆ ಬನ್ನಿ ಎಂದು ಕರೆದಿದ್ದಿರಲ್ಲ.. ಅಲ್ಲಿಗೂ ಬರಲು ನಾನು ತಯಾರಿದ್ದೇನೆ. ಬನ್ನಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಗೆ ಮತ್ತೆ ಆಣೆ-ಪ್ರಮಾಣದ ಸವಾಲು ಹಾಕಿದ್ದಾರೆ.