ಚಿಕ್ಕಮಗಳೂರು: ಕಾರ್ಣಿಕ ನುಡಿ ಎಂಬುದು ದೈವವಾಣಿಯ ಸ್ವರೂಪ, ಕಾರ್ಣಿಕಗಳು ನಿಜವಾಗುತ್ತವೆ ಎಂಬ ನಂಬಿಕೆ ಭಕ್ತರದ್ದು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ವಾಡಿಕೆಯಲ್ಲಿರುವ ಕಾರ್ಣಿಕ ನುಡಿ ಮಲೆನಾಡು ಭಾಗದಲ್ಲಿ ಕೊಂಚ ಕಡಿಮೆಯೇ. ಆದರೆ ಚಿಕ್ಕಮಗಳೂರಿನ ಪ್ರಸಿದ್ಧ ಕ್ಷೇತ್ರವೊಂದರ ಕಾರ್ಣಿಕ ಈಗ ಭರ್ಜರಿ ಸುದ್ದಿ ಮಾಡುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರು ಪಟ್ಟಣದಲ್ಲಿರುವ ಈ ಮೈಲಾರಲಿಂಗನ ಕಾರ್ಣಿಕ ನುಡಿಗೆ ಶತಮಾನದ ಇತಿಹಾಸವಿದೆ. ಪ್ರತಿವರ್ಷವೂ ಈ ವಿಜಯದಶಮಿಯ ಕೊನೆಯ ದಿನ ನಡೆಯುವ ಈ ಕಾರ್ಣಿಕ ಒಂದಲ್ಲ ಒಂದು ವಿಚಾರಗಳ ಕುರಿತು ಕಾರ್ಣಿಕ ನುಡಿಯಲಾಗುತ್ತದೆ. ಈ ವರ್ಷ “ಇಟ್ಟ ರಾಮರ ಬಾಣ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು. ಜ್ಞಾನದ ಹಣತೆ ಹಚ್ಚಿದರು, ಜೀವ ರಾಶಿಗೆ ಸಂಪಾಯಿತಲೇ ಪರಾಕ್” ಎಂದು ಈ ಬಾರಿಯ ಕಾರ್ಣಿಕ ನುಡಿಯಲಾಗಿದೆ.
ಹಾಗಾದ್ರೆ ಈ ಹಿಂದಿನ ವರ್ಷಗಳಲ್ಲಿ ನುಡಿಯಲಾದ ಬೀರೂರು ಪಟ್ಟಣದ ಮೈಲಾರಲಿಂಗನ ಕಾರ್ಣಿಕಗಳೇನು? ಅವುಗಳ ಅರ್ಥವೇನು? ಎಂಬ ಮಾಹಿತಿ ಇಲ್ಲಿದೆ.
2022ರ ಕಾರ್ಣಿಕ
“ಭೂಮಿಗೆ ವರುಣನ ಸಿಂಚನವಾಯಿತು. ಕುರುಪಾಂಡವರು ಕಾದಾಡಿದರು. ಧರ್ಮದ ಜ್ಯೋತಿ ಬೆಳಗಿದರು’ ಎಂದು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ಭವಿಷ್ಯವನ್ನ ನುಡಿಯಲಾಗಿತ್ತು. ಭೂಮಿಗೆ ವರುಣನ ಸಿಂಚನವಾಯಿತು. ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ. ಈ ಹಿಂದೆ ಸುರಿದ ಮಳೆಯಿಂದ ಅನಾಹುತವೇ ಜಾಸ್ತಿ ಆಯ್ತು. ಈಗ ಬರುವ ಮಳೆ ರೈತರಿಗೆ ಅನುಕೂಲವಾಗಲಿದೆ. ಕುರು ಪಾಂಡವರು ಕಾದಾಡಿದರು. ಚುನಾವಣೆ ಸಮೀಪಿಸುತ್ತಿದೆ. ಅಧಿಕಾರಕ್ಕಾಗಿ ಕಿತ್ತಾಟಗಳು ಹೆಚ್ಚಾಗಲಿವೆ. ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ಕಿತ್ತಾಟಗಳು ಹೆಚ್ಚಾಗಲಿವೆ. ಧರ್ಮದ ಜ್ಯೋತಿ ಬೆಳಗಿದರು. ಜನರಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚಾಗಲಿದೆ. ಜನ ಧರ್ಮದ ಆಧಾರದಲ್ಲಿ ಮತ ಚಲಾಯಿಸುವ ಸಾಧ್ಯತೆ ಇದೆ. ಎರಡೂ ಪಕ್ಷದವರು ಧರ್ಮವನ್ನ ಜ್ಯೋತಿ ಮಾಡಿಕೊಂಡಿದ್ದಾರೆ. ಸರ್ವರೂ ಎಚ್ಚರದಿಂದಿರಬೇಕು ಪರಾಕ್” ಎಂದು ದಶರಥ ಪೂಜಾರ್ ಅವರಿಂದ ಈ ಕಾರ್ಣಿಕದ ನುಡಿಗಳು ಹೊರಬಂದಿದ್ದವು.
2023ರ ಕಾರ್ಣಿಕ ಹೀಗಿತ್ತು
ಇಟ್ಟ ರಾಮನ ಬಾಣ ಹುಸಿಯಿಲ್ಲ. ಸುರರು ಅಸುರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಶಾಂತಿಯ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದಿರಬೇಕು ಪರಾಕ್. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಈ ಕಾರ್ಣಿಕ ನುಡಿ ರಾಜ್ಯದ ತುಂಬಾ ಪ್ರಸಿದ್ಧವಾಗಿದೆ. ಇಲ್ಲಿನ ಕಾರ್ಣಿಕ ನುಡಿ ನಿಜವಾಗುತ್ತೆ ಎಂಬ ನಂಬಿಕೆ ಭಕ್ತರಲ್ಲಿ ಅಚಲವಾಗಿದೆ. ದಶರಥ ಪೂಜಾರ್ ಅವರು ಮುಂಜಾನೆ 4.45ಕ್ಕೆ ಪ್ರತಿ ವರ್ಷ ಕಾರ್ಣಿಕ ನುಡಿಯುತ್ತಾರೆ. ರಾತ್ರಿಯಿಂದ ಬೆಳಗಿನ ಜಾವದವರೆಗೆ ಹೂವಿನ ಪಲಕ್ಕಿಯೊಂದಿಗೆ ಮೈಲಾರಲಿಂಗ ಸ್ವಾಮಿಯ ಮೆರವಣಿಗೆ ನಡೆಸಿ ಕೊನೆಗೆ ಈ ಕಾರ್ಣಿಕ ನುಡಿ ನುಡಿಯಲಾಗುತ್ತದೆ. 2023 ರ ಕಾರ್ಣಿಕದ ಅರ್ಥ ಅಂದ್ರೆ ಶ್ರೀ ರಾಮ ಇಟ್ಟ ಬಾಣ ಎಂದಿಗೂ ಗುರಿ ತಪ್ಪುವುದಿಲ್ಲ, ಕೆಟ್ಟವರು ಮತ್ತು ಒಳ್ಳೆಯವರು ಕಾದಡುತ್ತಾರೆ ಅಂತ ಹೇಳಿದ್ದರು.
2024 ರ ಕಾರ್ಣಿಕ ನಿಜವಾಗುತ್ತಾ?
“ಇಟ್ಟ ರಾಮನ ಬಾಣ ಹುಸಿಯಲ್ಲ, ನ್ಯಾಯದ ತಕ್ಕಡಿ ಜರುಗಿತು. ಜ್ಞಾನದ ಹಣತೆ ಹಚ್ಚಿದರು, ಜೀವರಾಶಿಗೆ ಸಂಪಾಯಿತಲೇ ಪರಾಕ್” ಎಂದು ಈ ವರ್ಷ ನುಡಿದಿರುವ ಕಾರಣಿಕ ಅಚ್ಚರಿ ಮೂಡಿಸಿದೆ. ಈ ವರ್ಷ ಆತಂಕದ ದೈವವಾಣಿಯನ್ನು ಗೊರವಯ್ಯ ನುಡಿದಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕವನ್ನು ಗೊರವಯ್ಯ ನುಡಿದಿದ್ದು, “ಇಟ್ಟ ರಾಮನ ಬಾಣ ಹುಸಿಯಿಲ್ಲ. ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವ ರಾಶಿಗೆ ಸಂಪಾಯಿತಲೇ ಪರಾಕ್” ಎಂದಿದ್ದಾರೆ.
ಅಂದರೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಕಲ ಜೀವರಾಶಿಗಳು ಸಂಪಾಗಿರುತ್ತದೆ. ಅದೇ ರೀತಿ ರಾಜ್ಯದಲ್ಲಿ ಮುಂದೆ ನಡೆಯಬಹುದಾದ ಅನಾಹುತಗಳ ಬಗ್ಗೆ ಕಾರ್ಣಿಕ ನುಡಿಯಲಾಗಿದೆ ಎಂದು ಭಾವಿಸಲಾಗಿದೆ. ರಾಜ್ಯದಲ್ಲಿ ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಕೆಲವರು ಜೈಲು ಪಾಲಾಗಿದ್ದಾರೆ. ಈ ಪ್ರಕರಣಗಳಲ್ಲಿ ಸತ್ಯಕ್ಕೆ ಜಯವಾಗುವುದಿಲ್ಲ. ಅನ್ಯಾಯದ ದಾರಿಯಲ್ಲಿದ್ದವರಿಗೆ ಜಯವಾಗುತ್ತದೆ. ಇದೆಲ್ಲದರ ನಡುವೆಯೇ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ ಎಂದು ಕಾರ್ಣಿಕದ ವಿಶ್ಲೇಷಣೆ ಕೇಳಿಬಂದಿದೆ.