ಬೇಲಿಯ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥಗೊಂಡ ಘಟನೆಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅಂಬಲಗೆರೆ ಗ್ರಾಮದಲ್ಲಿ ಈ ದುರ್ಘಟನೆ ಬೆಳಕಿಗೆ ಬಂದಿದೆ. ಆಟವಾಡುತ್ತಾ ಮಕ್ಕಳು ವಿಷದ ಕಾಯಿ ತಿಂದಿದ್ದಾರೆ. ಪರಿಣಾಮ 6 ಜನ ಮಕ್ಕಳು ಅಸ್ವಸ್ಥರಾಗಿದ್ದಾರೆ. ಪ್ರಕೃತಿ, ಮುಖೇಶ್, ಅನುಶ್ರೀ, ರಾಕೇಶ್, ಸಿಂಧು, ಮಹಾಲಕ್ಷ್ಮಿ ಅಸ್ವಸ್ಥ ಮಕ್ಕಳು ಎಂದು ತಿಳಿದು ಬಂದಿದೆ. ಕಾಯಿ ತಿನ್ನುತ್ತಿದ್ದಂತೆ ಮಕ್ಕಳಲ್ಲಿ ವಾಂತಿ, ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ಅಸ್ವಸ್ಥಗೊಂಡ ಮಕ್ಕಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಆಸ್ಪತ್ರೆಗೆ ಸೇರಿಸಿದ ಕಾರಣ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.