- ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ ಚಿತ್ರದುರ್ಗದಲ್ಲಿ ಪ್ರತಿಭಟನೆ
- ದರ್ಶನ್ ಬೆಂಬಲಿಗರ ವಿರುದ್ಧ ತೀವ್ರ ಆಕ್ರೋಶ
ಬೆಂಗಳೂರಿನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆದಿದೆ. ಈಗಾಗಲೇ ನಟ ದರ್ಶನ್ ಪವಿತ್ರ ಗೌಡ ಸೇರಿ 13 ಆರೋಪಿಗಳನ್ನ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆಯನ್ನು ಮಾಡುತ್ತಿದ್ದಾರೆ. ವಿಚಾರಣೆಯ ವೇಳೆ ಒಂದೊಂದೇ ತಿರುವುಗಳು ಸಿಗುತ್ತಿದೆ. ರೇಣುಕಾಸ್ವಾಮಿ ಕೊಲೆ ಆಕ್ರೋಶಿಸಿ ಚಿತ್ರದುರ್ಗದಲ್ಲಿ ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯದ ಮುಖಂಡರು ಸೇರಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಅನ್ನು ಸಿಬಿಐಗೆ ವಹಿಸಬೇಕು ಅಂತ ದರ್ಶನ್ ಬೆಂಬಲಿಗರ ವಿರುದ್ಧ ವಿವಿಧ ಸಂಘಟನೆಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದ ನೀಲಕಂಠೇಶ್ವರ ದೇಗುಲದಿಂದ ಆರಂಭಗೊಂಡ ಪ್ರತಿಭಟನೆ ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಈ ಪ್ರತಿಭಟನೆಯಲ್ಲಿ 2 ನಿಮಿಷ ಮೌನಾಚರಣೆ ಮಾಡಲಾಯಿತು. ನಟ ದರ್ಶನ್ ಹಾಗೂ ನಟಿ ಪವಿತ್ರ ಗೌಡ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಪ್ರತಿಭಟನೆ ವೇಳೆ ದರ್ಶನ್ ಫೋಟೋಗೆ ಚಪ್ಪಲಿ ಹಾರ ಹಾಕಿ, ಚಪ್ಪಲಿಯಿಂದ ತುಳಿದು, ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವೀರಶೈವ ಮಹಾಸಭಾ ಮುಖಂಡರು ನಿಷ್ಪಕ್ಷಪಾತ ತನಿಖೆ ಆಗಬೇಕು ಒಂದು ವೇಳೆ ಪ್ರಕರಣ ತಿರುವು ಪಡೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡದ್ದಾರೆ.