ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಕಂ ನಟಿ ಐಶ್ವರ್ಯ ಸರ್ಜಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯಲಿದ್ದಾರೆ. ಇದೇ ಜೂನ್ 10 ರಂದು ಐಶ್ವರ್ಯ- ಉಮಾಪತಿ ಕಲ್ಯಾಣ ಅದ್ಧೂರಿಯಾಗಿ ನೆರವೇರಲಿದೆ. ಸದ್ಯ ಮದುವೆ ಡೇಟ್ ಹೊರಬಿದ್ದಿದ್ದು ಸಖತ್ ಸುದ್ದಿಯಾಗ್ತಿದೆ. ಈಗಾಗಲೇ ಎರಡು ಕುಟುಂಬಸ್ಥರು ವೆಡ್ಡಿಂಗ್ ಕಾರ್ಡ್ ಹಂಚೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನೂ ಐಶ್ವರ್ಯ ಹಾಗೂ ಉಮಾಪತಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಜೋಡಿಯ ಎಂಗೇಜ್ಮೆಂಟ್ ನೆರವೇರಿತ್ತು. ಸರ್ಜಾ ಕುಟುಂಬಸ್ಥರು, ಆಪ್ತರು ಸೇರಿದಂತೆ ಸಿನಿಮಾ ಮಂದಿ ಕೂಡ ಎಂಗೇಜ್ ಮೆಂಟ್ ನಲ್ಲಿ ಭಾಗಿಯಾಗಿದ್ದರು. ಈಗ ಮದ್ವೆಯಲ್ಲೂ ಕೂಡ ಸೌತ್ ಸಿನಿಮಾ ಇಂಡಸ್ಟ್ರಿಯ ಅನೇಕ ತಾರೆಯರು ಐಶ್ವರ್ಯ ಕಲ್ಯಾಣಕ್ಕೆ ಸಾಕ್ಷಿಯಾಗಲಿದ್ದಾರೆ. ಚೆನ್ನೈನ ಹನುಮಾನ್ ಸನ್ನಿಧಿಯಲ್ಲೇ ಮದುವೆ ನಡೆಯಲಿದೆ. ಇದೇ ಜಾಗದಲ್ಲಿ ನಿಶ್ಚಿತಾರ್ಥ ನೆರವೇರಿತ್ತು.
ನಿಮಗೆಲ್ಲ ಗೊತ್ತಿರೋ ಹಾಗೇ ಐಶ್ವರ್ಯ ಕೂಡ ನಾಯಕಿ. ಪ್ರೇಮಬರಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ತಂದೆ ಅರ್ಜುನ್ ಸರ್ಜಾ ಅವರ ಮಗಳ ಮೊದಲ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ನಿರ್ಮಾಣ ಕೂಡ ತಾವೇ ಮಾಡಿ ಸ್ಯಾಂಡಲ್ ವುಡ್ ಗೆ ಮಗಳನ್ನ ಲಾಂಚ್ ಮಾಡಿದ್ದರು. ಐಶ್ವರ್ಯ ಹೆಚ್ಚೇನು ಸಿನಿಮಾಗಳನ್ನ ಮಾಡಲಿಲ್ಲ. ಇಲ್ಲಿತನಕ ಅವರು ಬಣ್ಣ ಹಚ್ಚಿರೋದು ಮೂರು ಸಿನಿಮಾಗಳಲ್ಲಿ ಮಾತ್ರ. ಕನ್ನಡದ ಪ್ರೇಮಬರಹ ಸೇರಿ ತಮಿಳಿನ ಇನ್ನೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ಅಣಿಯಾಗುತ್ತಿದ್ದಾರೆ.