- ರವೀನಾ ಟಂಡನ್ ಕಾರು ಚಾಲಕನ ಮೇಲೆ ಡ್ರಿಂಕ್ ಅಂಡ್ ರ್ಯಾಶ್ ಡ್ರೈವ್ ಆರೋಪ
- ಮೂವರು ಮಹಿಳೆಯರಿಗೆ ಕಾರು ಡಿಕ್ಕಿ ಹೊಡೆದ ಕಾರು ಚಾಲಕ
- ನಟಿ ರವೀನಾ ಟಂಡನ್ ಮೇಲೆ ಸ್ಥಳೀಯರ ಆಕ್ರೋಶ
ಬಾಲಿವುಡ್ ನಟಿ ರವೀನಾ ಟಂಡನ್ ಕಾರು ಚಾಲಕನ ಮೇಲೆ ಡ್ರಿಂಕ್ ಅಂಡ್ ರ್ಯಾಶ್ ಡ್ರೈವ್ ಆರೋಪ ಕೇಳಿಬಂದಿದೆ. ಮುಂಬೈನ ಬಾಂದ್ರಾ ಉಪನಗರದಲ್ಲಿರುವ ರಿಜ್ವಿ ಕಾಲೇಜ್ ಬಳಿ ವಾಕ್ ಮಾಡ್ತಿದ್ದ ಮೂವರು ಮಹಿಳೆಯರಿಗೆ ಕಾರು ಡಿಕ್ಕಿ ಹೊಡೆಸಿರುವ ಆತ ಮಹಿಳೆಯರ ಮೇಲೆ ಹಲ್ಲೆ ಕೂಡ ನಡೆಸಿದ್ದಾನಂತೆ. ಇದಕ್ಕೆ ಸಾಕ್ಷಿಯೆನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗ್ತಿದೆ. ನಟಿ ರವೀನಾ ಟಂಡನ್ ಮೇಲೆ ಸ್ಥಳೀಯರು ಮುಗಿಬಿದ್ದು ಭಾರೀ ಆಕ್ರೋಶ ವ್ಯಕ್ತಪಡಿಸ್ತಿರುವುದು ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ.
ಅಂದ್ಹಾಗೇ, ಈ ಘಟನೆ ಶನಿವಾರ ತಡರಾತ್ರಿ ನಡೆದಿರುವುದಾಗಿ ಸುದ್ದಿಯಾಗಿದೆ. ರ್ಯಾಶ್ ಡ್ರೈವ್ ಮಾಡ್ಕೊಂಡು ಮಹಿಳೆಯರಿಗೆ ಗುದ್ದಿದ ರವೀನಾರ ಕಾರನ್ನು ತಡೆದ ಕೆಲವರ ಮೇಲೆ ರವೀನಾ ಡ್ರೈವರ್ ಹಲ್ಲೆ ನಡೆಸಿದ್ದಾರೆನ್ನಲಾಗ್ತಿದೆ. ಈಗ ವೈರಲ್ ಆಗಿರುವ ವಿಡಿಯೋನಲ್ಲಿ ಮಹಿಳೆಯೊಬ್ಬಾಕೆ ‘ನನ್ನ ಮೂಗಿಗೆ ಗಾಯವಾಗಿ ರಕ್ತ ಸೋರುತ್ತಿದೆ, ಈಕೆ ನನಗೆ ಹೊಡೆದಿದ್ದಾಳೆ’ ಎಂದಿದ್ದಾಳೆ. ಆದರೆ, ನಟಿ ರವೀನಾ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವತಿಗೆ, ದಯಮಾಡಿ ವಿಡಿಯೋ ಮಾಡಬೇಡಿ, ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ ಅಂತ ಮನವಿ ಮಾಡಿಕೊಂಡಿರೋದು ಗೊತ್ತಾಗ್ತಿದೆ. ಸ್ಥಳೀಯರನ್ನ ನಿಯಂತ್ರಿಸೋಕೆ ಖುದ್ದು ರವೀನಾ ಪ್ರಯತ್ನಿಸ್ತಿರೋದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣಕ್ಕೆ ಪೊಲೀಸರಿಗೆ ಕರೆ ಮಾಡುವಂತಹ ಕೆಲಸ ಮಾಡಿರೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇನ್ನೂ ಘಟನೆ ಬಗ್ಗೆ ವಿಡಿಯೋ ಮಾಡಿರುವ ಮೊಹಮ್ಮದ್ ಎಂಬಾತ, ತನ್ನ ತಾಯಿ, ಸಹೋದರಿ ಹಾಗೂ ಸಂಬಂಧಿ ಮೂವರು ಮಹಿಳೆಯರು ರವೀನಾರ ಮನೆಯ ಬಳಿ ವಾಕಿಂಗ್ ಮಾಡುವಾಗ ರವೀನಾರ ಕಾರು ಅವರಿಗೆ ಗುದ್ದಿದೆ. ಬಳಿಕ ರವೀನಾರ ಕಾರಿನ ಡ್ರೈವರ್ ಬಂದು ತನ್ನ ಸಹೋದರಿ ಹಾಗೂ ತಾಯಿಗೆ ಹೊಡೆದಿದ್ದಾನೆ. ಆಗ ಕೆಲವರು ಬಂದು ಪ್ರಶ್ನೆ ಮಾಡಿದಾಗ ರವೀನಾ ಕಾರಿನಿಂದ ಇಳಿದು ಬಂದು ನನ್ನ ತಾಯಿಗೆ ಹೊಡೆದಿದ್ದಾಳೆ. ರವೀನಾ ಕುಡಿದ ಮತ್ತಿನಲ್ಲಿ ಕೆಟ್ಟದಾಗಿ ಮಾತನಾಡಿದ್ದಾರೆ’ ಎಂದಿದ್ದಾನೆ. ನಾನು ರವೀನಾ ವಿರುದ್ಧ ದೂರು ನೀಡಲೆಂದು ಖಾರ್ ಪೊಲೀಸ್ ಠಾಣೆಗೆ ಹೋಗಿದ್ದೆ, ಅಲ್ಲಿಯೇ ಸುಮಾರು ನಾಲ್ಕು ಗಂಟೆವರೆಗೆ ಕಾದೆ ವಿನಂತಿ ಮಾಡಿಕೊಂಡೆ ಆದರೆ ಅವರ್ಯಾರೂ ಸಹ ರವೀನಾ ವಿರುದ್ಧ ದೂರು ಸ್ವೀಕರಿಸಿಕೊಳ್ಳಲಿಲ್ಲ. ನಾನು ನ್ಯಾಯ ಪಡೆದೇ ತೀರುತ್ತೇನೆ’ ಎಂದಿದ್ದಾರೆ.