ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟಿ, ನಿರೂಪಕಿ ಅಪರ್ಣಾ ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ನಮ್ಮ ಮೆಟ್ರೋದ ಘೋಷಣೆಯ ಹಿಂದಿನ ಧ್ವನಿ ಅಪರ್ಣಾ ಅವರದ್ದಾಗಿದೆ. ಕಳೆದ 13 ವರ್ಷಗಳಿಂದ ಅಪರ್ಣ ಅವರು ನಮ್ಮ ಮೆಟ್ರೋಗೆ ಧ್ವನಿ ನೀಡುತ್ತಾ ಬಂದಿದ್ದರು. BMRCL ಅಧಿಕಾರಿಗಳು ಅಪರ್ಣಾ ಅವರಿಗೆ ಸಂತಾಪ ಸೂಚಿಸಿದ್ದಾರೆ.
ನಿರೂಪಕಿ ಅಪರ್ಣಾ ಅವರು ನಮ್ಮ ಮೆಟ್ರೋಗೆ ಧ್ವನಿಯಾಗಿದ್ದರು. ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಸೂಚನೆಗಳು ಅಪರ್ಣಾ ಅವರು ಧ್ವನಿಯಲ್ಲಿ ಕೇಳುತ್ತವೆ. “ಮುಂದಿನ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ.., ಬಾಗಿಲುಗಳು ಎಡಕ್ಕೆ ತೆರೆಯಲಿವೆ” ಎಂಬ ಶಾರೀರ ಅಪರ್ಣಾ ಅವರದ್ದು. ಆದರೆ, ಇದೀಗ ಶಾರೀರ ಇದ್ದು ಶರೀರ ಇಹಲೋಕ ತ್ಯಜಿಸಿದೆ. ನಿರೂಪಕಿ ಅಪರ್ಣಾ ಅವರಿಗೆ BMRCL ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡುವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ.
ಮೊದಲ ಬಾರಿಗೆ 2011ರ ಅಕ್ಟೋಬರ್ 20 ರಂದು ಎಂಜಿ ರೋಡ್ ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಆರಂಭಿಸಿದಾಗಿನಿಂದ ಇತ್ತೀಚೆಗೆ 2023ರ ಅಕ್ಟೋಬರ್ 9 ರಂದು ಉದ್ಘಾಟನೆಗೊಂಡ ಕೆಂಗೇರಿಯಿಂದ ಚಲ್ಲಘಟ್ಟ, ಕೆ.ಆರ್ ಪುರನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ನಟಿ ಅಪರ್ಣಾ ವಾಯ್ಸ್ ನೀಡಿದ್ದರು. ತಮ್ಮ ಧ್ವನಿ ನಿಲ್ದಾಣಗಳಲ್ಲಿ ಮತ್ತು ಮೆಟ್ರೋಗಳಲ್ಲಿ ಹೇಗೆ ಕೇಳಿಸುತ್ತದೆ ಎಂದು ತಿಳಿಯಲು ಅಪರ್ಣಾ ಅವರು 2011ರ ದೀಪಾವಳಿಯಂದು ಎಂಜಿ ರೋಡ್ ಇಂದ ಬೈಯ್ಯಪ್ಪನಹಳ್ಳಿವರಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.ಕಳೆದ 13 ವರ್ಷಗಳಿಂದ ಮೆಟ್ರೋ ನಿಲ್ದಾಣ ಮತ್ತು ರೈಲಿಗೆ ಅಪರ್ಣಾ ಧ್ವನಿ ನೀಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ BMRCL ಅಧಿಕಾರಿಗಳು ಅಪರ್ಣಾ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು.
ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಅವರು ಕೊನೆಯದಾಗಿ ನಟಿಸಿದ್ದ ‘ಗ್ರೇ ಗೇಮ್ಸ್’ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು