ಸಿಂಗರ್, ಕಂಪೋಸರ್, ಲಿರಿಕ್ ರೈಟರ್, ಸೋಲೋ ಪರ್ಫಾಮರ್ ಹೀಗೆ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಸ್ವಂತ ಬ್ರ್ಯಾಂಡ್ ಆಗಿರೋ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಸಿನಿಮಾದ ಮೂಲಕ ನಾಯಕನಟನಾಗಿ ಬಿಗ್ ಸ್ಕ್ರೀನ್ ಮೇಲೆ ದಿಬ್ಬಣ ಹೊರಡಲು ರೆಡಿಯಾಗಿದ್ದಾರೆ. ಈಗಾಗಲೇ ಟೀಸರ್, ಟ್ರೇಲರ್, ಹಾಡುಗಳ ಮೂಲಕ ಭರವಸೆ ಹುಟ್ಟಿಸಿರೋ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಸಿಲ್ವರ್ ಸ್ಕ್ರೀನ್ ಮೇಲೆ ಜಾದು ಮಾಡುವ ಎಲ್ಲಾ ಲಕ್ಷಣಗಳು ಕಾಣ್ತಿದೆ. ಈ ಬಗ್ಗೆ ಗ್ಯಾರಂಟಿ ನ್ಯೂಸ್ ಚಾನಲ್ ಜೊತೆ ಮಾತನಾಡಿದ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಗ್ಯಾರಂಟಿ ನ್ಯೂಸ್ ಜೊತೆ ಶೇರ್ ಮಾಡ್ಕೊಂಡಿದ್ದಾರೆ.
ಮೂಲತಃ ಸಕಲೇಶಪುರದವರಾದ ಚಂದನ್ ಶೆಟ್ಟಿ ಬದುಕಿ ಕಟ್ಟಿಕೊಂಡಿದ್ದು ಮಾತ್ರ ಬೆಂಗಳೂರಿನಲ್ಲಿ. ಅಲೆಮಾರಿ ಚಿತ್ರದ ಮೂಲಕ ಸಾಹಿತಿ ಹಾಗೂ ಅಸಿಸ್ಟೆಂಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಸಹಕಾರದಿಂದ ಸಂಗೀತ ಲೋಕ ಪ್ರವೇಶಿಸಿದ ಚಂದನ್, ವರದನಾಯಕ, ಪವರ್, ಚಕ್ರವ್ಯೂಹ, ಭಜರಂಗಿ ಸೇರಿದಂತೆ ಇನ್ನಿತರ ಕೆಲ ಸಿನಿಮಾಗಳಿಗೆ ಕೆಲಸ ಮಾಡಿದರು. ಅದಕ್ಕಿಂತ ಹೆಚ್ಚಾಗಿ ಕನ್ನಡ ರ್ಯಾಪ್ ಹಾಡುಗಳ ಮೂಲಕ ಪಾಪ್ಯೂಲಾರಿಟಿ ಹೆಚ್ಚಿಸಿಕೊಂಡರು. ಸೀಜರ್, ಪೊಗರು ಸೇರಿದಂತೆ ಕೆಲ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದರು. ಇದೀಗ ಗೌರಿ ಸಿನಿಮಾದ ಹಾಡಿಗೆ ಟೈಮ್ ಬರುತ್ತೆ ನಂಗೂ ಟೈಮ್ ಬರುತ್ತೆ ಅನ್ನೋ ಲಿರಿಕ್ಸ್ ಬರ್ಕೊಟ್ಟು ಟ್ರೆಂಡಿಂಗ್ ನಲ್ಲಿದ್ದಾರೆ. ಈ ನಡುವೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದ ಮೂಲಕ ನಾಯಕನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇನ್ನೂ ಚಂದನ್ ವೈಯಕ್ತಿಕ ಬದುಕು ಹಳಿತಪ್ಪಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಕಳೆದೊಂದು ತಿಂಗಳ ಹಿಂದೆ ಡಿವೋರ್ಸ್ ಪಡೆದರು. ಇನ್ಮುಂದೆ ನಿವೇದಿತಾ ಹಾಗೂ ನಾನು ಪತಿ – ಪತ್ನಿಯಾಗಿರಲ್ಲ. ಆದರೆ, ಸ್ನೇಹಿತರಾಗಿ ಮುಂದುವರೆಯುತ್ತೇವೆ ಎಂದು ತಿಳಿಸಿದರು. ಈ ಬಗ್ಗೆ ಮತ್ತೆ ಮಾತನಾಡಲು ಇಚ್ಚಿಸಿದ ಚಂದನ್, ಜೀವನ ಕಲಿಸಿಕೊಟ್ಟ ಪಾಠದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಜನ ಮುಂದೆ ಒಂದು ಮಾತನಾಡ್ತಾರೆ, ಹಿಂದೆ ಒಂದು ಮಾತನಾಡ್ತಾರೆ. ಹೀಗಾಗಿ ನಾನು ಯಾರನ್ನೂ ನಂಬಲ್ಲ. ಬೆಳವಣಿಗೆ ನೋಡಿ ಹೊಟ್ಟೆ ಉರಿದುಕೊಳ್ಳಬೇಡಿ ಎನ್ನುತ್ತಾ ಇನ್ಮುಂದೆ ನಾನಾಯ್ತು, ನನ್ನ ಕೆಲಸ ಆಯ್ತು ಅಂತ ಇರುವುದಾಗಿ ಗ್ಯಾರಂಟಿ ನ್ಯೂಸ್ಗೆ ತಿಳಿಸಿದರು.
ಎಲ್ರೂ ದುಡ್ಡಿನ ಹಿಂದೆ ಓಡ್ತಿದ್ದಾರೆ. ಸಾಯುವಾಗ ಯಾರೂ ಏನು ಹೊತ್ಕೊಂಡೋಗಲ್ಲ, ಎಷ್ಟು ಕೋಟಿ ಇದ್ರೂ ಡಾಕ್ಟರ್ ಉಳಿಸಿಕೊಳ್ಳೋಕೆ ಆಗಲ್ಲ ಅಂದರೆ ಏನ್ಮಾಡ್ತೀರಾ? ಫ್ಯಾಮಿಲಿ-ಸಂಬಂಧ ಎಲ್ಲ ಮರೆತು ಜೀವನ ಮಾಡ್ತಿದ್ದಾರೆ. ಮದ್ವೆಯಾಗ್ತಾರೆ, ಒಂದೆರಡು ಮಕ್ಕಳು ಮಾಡ್ಕೊತ್ತಾರಷ್ಟೇ. ಅವರಿಗೆ ಸಂಬಂಧಗಳ ಬೆಲೆಯೇ ಗೊತ್ತಾಗಲ್ಲ ಅಂತ ಬೇಸರ ಪಟ್ಟುಕೊಂಡರು. ಇದೇ ವೇಳೆ ಕಷ್ಟ ಮನುಷ್ಯನಿಗೆ ಬಾರದೇ ಮರಕ್ಕೆ ಬರುತ್ತಾ? ಭಗವಂತ ಏನು ಕೊಟ್ಟಿದ್ದಾನೋ ಅದರಲ್ಲಿ ತೃಪ್ತಿಯಿದೆ. ಕಲಾ ಸರಸ್ವತಿ ಸೇವೆಯ ಮೂಲಕ ಕರುನಾಡ ಜನರ ಋಣ ತೀರಿಸುವ ಪ್ರಯತ್ನ ಮಾಡ್ತೀನಿ ಅಂತ ಭರವಸೆ ನೀಡಿದರು.