ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಗ್ಯಾಂಗ್ ಜೈಲುಹಕ್ಕಿಗಳಾಗಿರೋದು ನಿಮಗೆಲ್ಲ ಗೊತ್ತೆಯಿದೆ. ಈಗಾಗಲೇ 14 ದಿನಗಳ ಜೈಲುವಾಸ ಅನುಭವಿಸಿರೋ ಡಿ ಗ್ಯಾಂಗ್ಗೆ ಈಗ ಕೋರ್ಟ್ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಸದ್ಯ ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರೋ ಸ್ಯಾಂಡಲ್ವುಡ್ ಸಾರಥಿ ದರ್ಶನ್ ಅವರ ಬಗ್ಗೆ ಅನೇಕ ನಟ-ನಟಿಯರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಅದರಂತೇ ದರ್ಶನ್ ಜೊತೆ ತಾರಕ್ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದ ನಟಿ ಯಮುನಾ ಶ್ರೀನಿಧಿ ಗ್ಯಾರಂಟಿ ನ್ಯೂಸ್ ಚಾನಲ್ ಜೊತೆ ಮಾತನಾಡಿದ್ದಾರೆ. ತಾವು ಕಂಡಂತೆ ದರ್ಶನ್ ಹೇಗೆ? ಏನು? ಅನ್ನೋದನ್ನ ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಒಬ್ಬ ವ್ಯಕ್ತಿಯಾಗಿ, ಒಬ್ಬ ನಟನಾಗಿ ದರ್ಶನ್ ಅವರು ನಂಗೆ ಬಹಳ ಇಷ್ಟವಾಗ್ತಾರೆ. ಅವರೊಟ್ಟಿಗೆ ಆಕ್ಟ್ ಮಾಡುವ ಮೊದಲೇ ಅವರ ಮೇಲೆ ನಂಗೆ ಗೌರವವಿತ್ತು. ತಾರಕ್ ಚಿತ್ರದಲ್ಲಿ ಅಭಿನಯಿಸಿದ್ಮೇಲೆ ದರ್ಶನ್ ಅವರ ವ್ಯಕ್ತಿತ್ವ ಎಂತಹದ್ದು ಅನ್ನೋದು ತಿಳಿತು. ದೊಡ್ಡವರು, ಚಿಕ್ಕವರು ಅಂತ ಭೇದಭಾವ ಮಾಡದೇ, ತಾರತಮ್ಯ ತೋರದೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಪ್ರತಿಯೊಬ್ಬರಿಗೂ ನಿಷ್ಕಲ್ಮಶವಾದ ಪ್ರೀತಿ ತೋರಿಸ್ತಾರೆ. ಹೀಗಾಗಿ, ದಾಸ ದರ್ಶನ್ ಅವರಿಗೆ ದೊಡ್ಡ ಫ್ಯಾನ್ ಆಗ್ಬಿಟ್ಟೆ ಎನ್ನುವ ನಟಿ ಯಮುನಾ ಶ್ರೀನಿಧಿಯವರು, ದರ್ಶನ್ ಅವರ ವ್ಯಕ್ತಿತ್ವ ಹಾಗೂ ಸರಳತೆಯನ್ನ ಕೊಂಡಾಡಿದರು. ಚಾಲೆಂಜಿಂಗ್ ಸ್ಟಾರ್ ಅವರನ್ನೂ ತುಂಬಾ ಗೌರವಿಸ್ತೀವಿ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತಿದೆ. ಹೀಗಾಗಿ, ನಾನು ಕಣ್ಣಾರೆ ನೋಡದೇ ವಿಚಾರವನ್ನ ನಂಬೋದಕ್ಕೆ ಹೋಗಲ್ಲ. ಈ ಕೃತ್ಯದ ಬಗ್ಗೆ ಏನನ್ನೂ ಮಾತನಾಡಲ್ಲ ಬಟ್ ದರ್ಶನ್ ಅವರು ಇಂತಹ ಕೃತ್ಯದಲ್ಲಿ ಭಾಗಿಯಾಗಿರಲಿಕ್ಕೆ ಸಾಧ್ಯವಿಲ್ಲ ಅನ್ನೋದು ನನ್ನ ಅಭಿಪ್ರಾಯ. ತಮ್ಮ ಅಭಿಪ್ರಾಯಗಳು ಏನೇ ಇದ್ರೂ ಕೂಡ ಈ ಪ್ರಕರಣ ನ್ಯಾಯಾಯದಲ್ಲಿದೆ. ತೀರ್ಪು ಏನು ಬರುತ್ತೆ ಅನ್ನೋದನ್ನ ಕಾದುನೋಡಬೇಕು.
ಇನ್ನೂ ದರ್ಶನ್ ಹೋದಲ್ಲಿ ಬಂದಲ್ಲಿ ಜನ ಮುತ್ತಿಕೊಳ್ಳೋಕೆ ದುಡ್ಡು ಖರ್ಚು ಮಾಡ್ತಿದ್ದರು ಅನ್ನೋ ಸುದ್ದಿ ಕೇಳಿಬರ್ತಿದೆ. ಯಾವುದೇ ಕಾರಣಕ್ಕೂ ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ದರ್ಶನ್ಗಿರುವ ಫ್ಯಾನ್ ಬೇಸ್ ಎಂತಹದ್ದು ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ಅಷ್ಟಕ್ಕೂ, ನನ್ನ ಪರವಾಗಿ ಮಾತನಾಡಿ ಅಂತ ದರ್ಶನ್ ಎಲ್ಲೂ, ಯಾರಿಗೂ ಹೇಳಿಕೊಟ್ಟಿಲ್ಲ. ಇವತ್ತು ನಾನು ಕೂಡ ಮೀಡಿಯಾ ಮುಂದೆ ಬಂದು ಮಾತನಾಡ್ತಿರೋದಕ್ಕೆ ಕಾರಣ ದರ್ಶನ್ ಅವರ ಮೇಲಿರುವ ಗೌರವ ಹಾಗೂ ಅಭಿಮಾನ ಅಲ್ಲದೇ ಮತ್ತೇನು ಅಲ್ಲವೆಂದು ಮುಕ್ತವಾಗಿ ಹೇಳಿಕೊಂಡರು. ಸದ್ಯಕ್ಕೆ ದರ್ಶನ್ ಅವರು ಆರೋಪಿ ಅಷ್ಟೇ. ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಬೇಡಿ. ಅವರ ವಿರುದ್ದ ಹಗೆ ಸಾಧಿಸಬೇಡಿ. ಅವರಿಗೆ ಕಳಂಕ ತರುವಂತಹ ಕೆಲಸ ಮಾಡ್ಬೇಡಿ. ತಪ್ಪಾಗಿದ್ರೆ, ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತೆ. ಅಲ್ಲಿವರೆಗೂ ಶಾಂತರೀತಿಯಿಂದ ಇರಿ. ಒಬ್ಬ ದೊಡ್ಡ ನಟನ ತೇಜೋವಧೆ ಮಾಡುವಂತಹ ಕೆಲಸ ಮಾಡೋದಕ್ಕೆ ಮುಂದಾಗ್ಬೇಡಿ ಅಂತ ಮನವಿ ಮಾಡಿಕೊಳ್ಳುವ ಪ್ರಯತ್ನ ಮಾಡಿದರು ನಟಿ ಯಮುನಾ ಶ್ರೀನಿಧಿಯವರು.
ದರ್ಶನ್ ನಮ್ಮನ್ನ ತುಂಬಾ ಚೆನ್ನಾಗಿ ನಡೆಸಿಕೊಂಡಿದ್ದಾರೆ. ನಿಷ್ಕಲ್ಮಶವಾದ ಪ್ರೀತಿ-ಅಭಿಮಾನ ತೋರಿಸಿದ್ದಾರೆ. ಹೀಗಾಗಿ ಅವರಿಗೆ ನಿಷ್ಟೆಯಿಂದಿರುವುದು ನಮ್ಮ ಕರ್ತವ್ಯ. ಹಾಗಂತ, ನಾನು ಅವರನ್ನ ಪ್ರೊಟೆಕ್ಟ್ ಮಾಡ್ಕೊಂಡು ಮಾತನಾಡ್ತಿಲ್ಲ. ಅವರ ಬಗ್ಗೆ ನನಗಿರುವ ಅಭಿಪ್ರಾಯ ವ್ಯಕ್ತಪಡಿಸ್ತಿದ್ದೀನಿ. ಇನ್ನೊಂದು ಮುಖ್ಯ ಅಂಶ ಅಂದರೆ ಮುಂದಿನ ವಾರ ಅವರ ಸಿನಿಮಾ ರಿಲೀಸ್ ಇದ್ರೂ ಕೂಡ ಬೇರೆಯವರ ಚಿತ್ರಗಳನ್ನ ಪ್ರಮೋಷನ್ ಮಾಡಿಕೊಡಲು ಬರ್ತಿದ್ದರು. ಯಾವ ನಟ ತಮ್ಮ ಸಿನಿಮಾ ರಿಲೀಸ್ ಸಮಯದಲ್ಲಿ ಇನ್ನೊಂದು ಸಿನಿಮಾ ಪ್ರಮೋಟ್ ಮಾಡ್ತಾರೆ ನೀವೇ ಹೇಳಿಬಿಡಿ.
ಇನ್ನು ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರ ಬಗ್ಗೆ ನಾನು ಹೇಳಲೇಬೇಕು. ಭಾರತೀಯ ನಾರಿಯಾಗಿ ಹೆಂಗಿರ್ಬೇಕು ಹಂಗಿದ್ದಾರೆ. ಆ ಹೆಣ್ಣುಮಗಳು. ಸತಿಧರ್ಮ ಪಾಲಿಸ್ತಿದ್ದಾರೆ, ಗಂಡನ ಪರವಾಗಿ ನಿಂತು ಹೋರಾಟ ಮಾಡ್ತಿದ್ದಾರೆ. ಆ ಮಹಾತಾಯಿಗೆ ನಾನು ಕೈ ಎತ್ತಿ ಮುಗಿಯುತ್ತೀನಿ ಎಂದರು. ಇದೇ ವೇಳೆ ವಿನೀಶ್ ಪರಿಸ್ಥಿತಿ ನೆನೆದು ನೊಂದುಕೊಂಡರು ಯಮುನಾ. ಹೌದು, ನಂಗೂ ಒಬ್ಬ ಮಗ ಇದ್ದಾನೆ. ತಂದೆ ಜೈಲುವಾಸ ಅನುಭವಿಸ್ತಿದ್ದಾರೆ ಅಂದರೆ ಯಾವುದೇ ಮಗನಿಗೆ ಸಹಿಸಿಕೊಳ್ಳಲು ಅಸಾಧ್ಯ. ಅದರಲ್ಲೂ ವಿನೀಶ್ ಇನ್ನೂ ಚಿಕ್ಕವನು. ಅವನ ಮೇಲೆ ಈ ಘಟನೆ ತುಂಬಾ ಪರಿಣಾಮ ಬೀರಿರುತ್ತೆ. ದಯವಿಟ್ಟು ಯಾರೂ ಕೂಡ ಆ ಮಗುವಿಗೆ ಹಿಡಿಶಾಪ ಹಾಕುವಂತಹ ಕೆಲಸ ಮಾಡ್ಬೇಡಿ. ಅದೇ ರೀತಿ ಡಿಬಾಸ್ ಫ್ಯಾನ್ಸ್ ಕೂಡ ಆಕ್ರೋಶಭರಿತಗೊಂಡು ಕೆಟ್ಟದಾಗಿ ಮಾತನಾಡೋದಕ್ಕೆ ಹೋಗಬೇಡಿ. ಯಾರು ಎಷ್ಟೇ ಕೆರಳಿಸಿದ್ರೂ ಕೂಡ ಶಾಂತರೀತಿಯಿಂದ ವರ್ತಿಸಿ ಎಂದರು. ಮುಂದಿನ ದಿನಗಳಲ್ಲಿ ದರ್ಶನ್ ಅವರೊಟ್ಟಿಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದರು.