ನಟ ದರ್ಶನ್ ನಟಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವವರ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರೋ ದರ್ಶನ್, ಅಷ್ಟೇ ವಿವಾದಗಳಿಂದಲೂ ಫೇಮಸ್ ಆಗಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ದರ್ಶನ್ ಮೇಲಿನ ಪ್ರಕರಣಗಳ ಪಟ್ಟಿ ಇಲ್ಲಿದೆ ನೋಡಿ…
- ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ದರ್ಶನ್ ವಿರುದ್ಧ 2011ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್ ಅವರು 28 ದಿನ ಜೈಲಿನಲ್ಲಿದ್ದರು.
- 2019ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಸಹ ನಟನ ಮೇಲೆ ದರ್ಶನ್ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ದೂರು ದಾಖಲಾಗಿರಲಿಲ್ಲ.
- 2021ರಲ್ಲಿ ಸಾಲ ಹಾಗೂ ವಂಚನೆ ಸಂಬಂಧ ನಿರ್ಮಾಪಕರೊಬ್ಬರು ಹಾಗೂ ದರ್ಶನ್ ನಡುವೆ ಆರೋಪ- ಪ್ರತ್ಯಾರೋಪ ನಡೆದಿತ್ತು.
- ಮೈಸೂರಿನ ಹೋಟೆಲ್ ಸಿಬ್ಬಂದಿಯ ಮೇಲೆ ದರ್ಶನ್ ಅವರು ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕರೊಬ್ಬರು ಆರೋಪಿಸಿದ್ದರು. ಪೊಲೀಸರು ಹೋಟೆಲ್ಗೆ ತೆರಳಿ ತನಿಖೆ ನಡೆಸಿದ್ದರು.
- 2023ರ ನವೆಂಬರ್ನಲ್ಲಿ ದರ್ಶನ್ ಮನೆಯ ಸಾಕು ನಾಯಿ ಮಹಿಳಾ ವಕೀಲರೊಬ್ಬರಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜರಾಜೇಶ್ವರಿ ಠಾಣಾ ಪೊಲೀಸರು ದರ್ಶನ್ಗೆ ನೋಟಿಸ್ ನೀಡಿದ್ದರು.
- ‘ಕಾಟೇರ’ ಸಿನಿಮಾ ಯಶಸ್ಸಿಗೆ ಸಂಬಂಧಿಸಿ ಬೆಂಗಳೂರಿನ ಜೆಟ್ಲ್ಯಾಗ್ ಪಬ್ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ದರ್ಶನ್ ಸೇರಿ ಹಲವರು ನಿಯಮ ಉಲ್ಲಂಘಿಸಿ ತಡರಾತ್ರಿ ವರೆಗೆ ಪಾರ್ಟಿ ನಡೆಸಿದ್ದ ಆರೋಪವಿತ್ತು. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ದರ್ಶನ್ ಪೊಲೀಸರ ವಿಚಾರಣೆ ಎದುರಿಸಿದ್ದರು.