ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಆದರೆ ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ನಟ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು, ದರ್ಶನ್ ಬಳಿ ಇದ್ದ ಹಣವನ್ನು ವಶಪಡಿಸಿಕೊಂಡಿದ್ದರು. ಆ ಹಣವನ್ನು ಮರಳಿ ಕೊಡಿಸುವಂತೆ ನಟ ದರ್ಶನ್ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನದ ಬಳಿಕ ಅವರ ಬಳಿ ಇದ್ದ ಬರೋಬ್ಬರಿ 37 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಸೀಜ್ ಮಾಡಿದ್ದರು. ಈ ಹಣವನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಬಳಸಲಾಗಿತ್ತು ಎಂದು ಪೊಲೀಸರು ಆರೋಪ ಮಾಡಿದ್ದರು. ರೇಣುಕಾ ಸ್ವಾಮಿ ಕೊಲೆಯನ್ನು ತಾವು ಮಾಡಿದ್ದಾಗಿ ಒಪ್ಪಿಕೊಳ್ಳಲು ಮೂವರಿಗೆ ಒಂದಿಷ್ಟು ಹಣವನ್ನು ಸಹ ನೀಡಲಾಗಿತ್ತು. ಹಣ ವಶಪಡಿಸಿಕೊಂಡಿದ್ದ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಆದರೆ ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ವಶಪಡಿಸಿಕೊಂಡ ಹಣ, ಸಾಲವಾಗಿ ನೀಡಲಾಗಿದ್ದ ಹಣ ಅದು ಎಂದು ವಾದಿಸಿದ್ದರು. ಮೋಹನ್ ರಾಜ್ ಎಂಬುವರಿಗೆ ಸಾಲದ ರೂಪದಲ್ಲಿ ನಟ ದರ್ಶನ್ ಅವರು ಹಣ ನೀಡಿದ್ದರು. ಆ ಹಣವನ್ನು ಮೋಹನ್ ರಾಜ್, ದರ್ಶನ್ಗೆ ಮರಳಿಸಿದ್ದರು. ಆ ಹಣವನ್ನು ದರ್ಶನ್ ತಮ್ಮ ನಿವಾಸದಲ್ಲಿ ಇರಿಸಿಕೊಂಡಿದ್ದರು. ಆ ಹಣ ಕೊಲೆ ಮುಚ್ಚಿಹಾಕಲು ಬಳಸಲೆಂದು ಇರಿಸಿಕೊಂಡಿದ್ದ ಹಣ ಅಲ್ಲ ಎಂದು ವಾದ ಮಾಡಿದ್ದರು.
ಇದೀಗ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ನಟ ದರ್ಶನ್, ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಒಂದೊಮ್ಮೆ ಪೊಲೀಸರು ಅಥವಾ ಆದಾಯ ತೆರಿಗೆ ಇಲಾಖೆ ಆಕ್ಷೇಪಣೆ ಸಲ್ಲಿಸಿದಲ್ಲಿ ಮತ್ತೊಂದು ಸುತ್ತು ವಾದ, ವಿಚಾರಣೆಗಳು ನಡೆದ ಬಳಿಕ ಆ ಹಣ ದರ್ಶನ್ಗೆ ಸೇರಲಿದೆಯೇ ಅಥವಾ ಪೊಲೀಸರ ಬಳಿ ಸಾಕ್ಷಿಯಾಗಿಯೇ ಉಳಿದುಕೊಳ್ಳಲಿದೆಯೇ ತಿಳಿಯಲಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ; https://whatsapp.com/channel/0029VafyCqRFnSzHn1JWKi1B