ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿರುವ ಫೋಟೊಗಳು ವೈರಲ್ ಆಗಿದ್ದು, ಸರ್ಕಾರ ಇದೀಗ ಈ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಏಳು ಮಂದಿ ಜೈಲು ಸಿಬ್ಬಂದಿಯ ಅಮಾನತ್ತು ಸಹ ಮಾಡಲಾಗಿದೆ. ಇಂದು ಸಂಸದೆ ಸುಮಲತಾ ಅವರ ಹುಟ್ಟುಹಬ್ಬ. ಅಂಬರೀಶ್ ಸ್ಮಾರಕಕ್ಕೆ ನಮಿಸಿದ ಬಳಿಕ ದರ್ಶನ್ ಅವರ ಜೈಲುವಾಸದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸುಮಲತಾ, ‘ಜೈಲಿನಲ್ಲಿ ಇದು ಸಾಮಾನ್ಯ’ ಎಂದಿದ್ದಾರೆ.
‘ದರ್ಶನ್ ನಮಗೆ ಆಪ್ತರು. ನಾನು ಮಾತನಾಡಿದರೆ ವಿವಾದ ಆಗುತ್ತೆ, ಆದರೆ ಎಲ್ಲರಿಗೂ ಗೊತ್ತಿರುವ ವಿಚಾರವೆಂದರೆ, ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ? ಈಗ ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಮಾಧ್ಯಮಗಳು ಈ ಮುಂಚೆ ಏಕೆ ಕೇಳಲಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ‘ಐಪಿಎಸ್ ಅಧಿಕಾರಿ ರೂಪಾ ಅವರು ಈ ಮೊದಲು ಸಹ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅವ್ಯಹಾರಗಳನ್ನು ಬಯಲು ಮಾಡಿದ್ದರು. ಆಗ ನೀವು ಸಹ ಪ್ರಶ್ನೆ ಮಾಡಿರಲಿಲ್ಲ ಏಕೆ?’ ಎಂದು ಮಾಧ್ಯಮಗಳನ್ನು ಸುಮಲತಾ ಪ್ರಶ್ನೆ ಮಾಡಿದರು.