ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರ ಗೌಡ ಸೇರಿದಂತೆ ಸುಮಾರು ಹದಿನೇಳು ಜನ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಲ್ಲಿ ಕಂಬಿ ಎಣಿಸ್ತಿದ್ದಾರೆ. ಜುಲೈ 28 ರವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದು, ನಿನ್ನೆಯಷ್ಟೇ ಪೊಲೀಸರು ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್, ಮಾಜಿ ಉಪಮೇಯರ್ ಮೋಹನ್ ರಾಜ್, ಪವಿತ್ರ ಗೆಳತಿ ಸಮತಾ ಸೇರಿದಂತೆ ಮೂರು ಜನರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ. ದಿನೇ ದಿನೇ ತನಿಖೆ ಚುರುಕಾಗ್ತಿದ್ದು ಏನಾಗಲಿದೆ ಈ ಪ್ರಕರಣ ಎನ್ನುವ ಕುತೂಹಲ ಹೆಚ್ಚಿದೆ. ಹೀಗಿರುವಾಗಲೇ ಕನ್ನಡ ಚಿತ್ರರಂಗದ ಕೆಲ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ದರ್ಶನ್ ಪರವಾಗಿ ಬ್ಯಾಟ್ ಬೀಸ್ತಿದ್ದಾರೆ. ಇದಕ್ಕೆ ಬಹುಭಾಷಾ ನಟಿ ಸಂಜನಾ ಗಲ್ರಾಣಿ ಕೂಡ ಹೊರತಾಗಿಲ್ಲ
ಹೌದು, ದರ್ಶನ್ ಅರೆಸ್ಟ್ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ದಾಸನ ಪರವಾಗಿ ಮಾತನಾಡಿದ್ದ ಸಂಜನಾ ಇದೀಗ ಗ್ಯಾರಂಟಿ ನ್ಯೂಸ್ ಚಾನಲ್ ಜೊತೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ದರ್ಶನ್ ಅವರು ನನ್ನ ಮೋಸ್ಟ್ ಫೇವರಿಟ್ ಹೀರೋ, ಸೇಮ್ ಟೈಮ್ ಜೆಂಟಲ್ ಮ್ಯಾನ್ ಕೂಡ. ಇಂತಿಪ್ಪ ದರ್ಶನ್ ಸಣ್ಣ ಪರಿವಾರದ ಹುಡುಗನ ಮೇಲೆ ಕೈ ಮಾಡಿದ್ದಾರೆ, ಕೊಲೆಗೈಯ್ದಿದ್ದಾರೆ ಅನ್ನೋದನ್ನ ನಾನು ಯಾವುದೇ ಕಾರಣಕ್ಕೂ ನಂಬೋದಿಲ್ಲ. ಅಷ್ಟಕ್ಕೂ, ಅಚಾತುರ್ಯ ನಡೆದೋಗಿದೆ. ಈ ಘಟನೆ ಯಾಕಾಯ್ತು? ಯಾರಿಂದಾಯ್ತು ಎಂಬುದರ ಸುತ್ತ ತನಿಖೆ ನಡೆಯುತ್ತಿದೆ. ಸತ್ಯ ಯಾವತ್ತಿದ್ರೂ ಆಚೆ ಬರಲೇಬೇಕು, ಅಲ್ಲಿವರೆಗೂ ತಾಳ್ಮೆಯಿಂದ ಕಾಯೋಣ ಅಂತ್ಲೇ ನಾನು ಹೇಳ್ತೀನಿ ಎಂದರು.
ಇದೇ ವೇಳೆ ಕಂಬಿ ಹಿಂದಿನ ಕಾಟೇರನ ಪರಿಸ್ಥಿತಿ ನೆನೆದು ಬೇಸರಪಟ್ಟುಕೊಂಡ ಸಂಜನಾ, ನಾನು ಜೈಲುವಾಸ ಅನುಭವಿಸಿದ್ದೀನಿ. ಮಾಡದೇ ಇರೋ ತಪ್ಪಿಗೆ ಜೈಲು ಸೇರಿದಾಗ ಒಂದು ತುತ್ತು ಊಟ ಸೇರಲ್ಲ. ಮಾನಸಿಕವಾಗಿ ಹಿಂಸೆ ಆಗ್ತಿರುತ್ತೆ. ಇಂತಹದ್ದೇ ಸಂದರ್ಭದಲ್ಲಿ ಈಗ ಸಾರಥಿಯಿದ್ದಾರೆ, ಆದಷ್ಟು ಬೇಗ ಅವರು ಆರೋಪ ಮುಕ್ತರಾಗಿ ಬರಬೇಕು. ಇತ್ತ ಮೃತ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು. ಅವರ ಪತ್ನಿಗೆ ಸರ್ಕಾರ ಉದ್ಯೋಗ ನೀಡಿ ನೆರವಾಗಬೇಕು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ದರ್ಶನ್ ಮೇಲೆ ಕೇಳಿಬರ್ತಿರೋ ಹಲ್ಲೆ ಆರೋಪವನ್ನ ಸುಳ್ಳು ಎಂದು ವಾದಿಸಿದರು. ಶೂಟಿಂಗ್ ಸೆಟ್ನಲ್ಲಿ ಹಲ್ಲೆ ನಡೆಸ್ತಾರೆನ್ನುವ ಆರೋಪಕ್ಕೆ ಉತ್ತರ ಕೊಟ್ಟ ಸಂಜನಾ, ಟೆಕ್ನಿಷಿಯನ್ಸ್ ಅಂದರೆ ಪ್ರಾಣಕ್ಕಿಂತ ಹೆಚ್ಚು. ಸಹನಟರನ್ನ ಕೂಡ ಸಹೋದರರಂತೆ ನಡೆಸಿಕೊಳ್ತಾರೆ, ಹೀಗಿರುವಾಗ ಕಿರಿಕ್ ಮಾಡಲು ಸಾಧ್ಯಾನೇ ಇಲ್ಲ ಎಂದರು. ಏನೇ ಆದರೂ ಗಂಡನ ಬಿಟ್ಕೊಡಲ್ಲ ಅಂತ ದರ್ಶನ್ ಅವರಿಗೆ ಬೆನ್ನೆಲುಬಾಗಿ ನಿಂತಿರುವ ವಿಜಯಲಕ್ಷ್ಮಿ ಮೇಡಂಗೆ ಸೆಲ್ಯೂಟ್ ಹೊಡೆದರು. ಇನ್ನೂ ಸೋಷಿಯಲ್ ಮೀಡಿಯಾ ಮಿಸ್ ಯೂಸ್ ಮಾಡೋದರ ಬಗ್ಗ ರಿಯಾಕ್ಷನ್ ಕೊಟ್ಟ ಸಂಜನಾ ಗಲ್ರಾಣಿ, ಕಂಡವರ ಮನೆಯ ಹೆಣ್ಮಕ್ಳ ಬಗ್ಗೆ ಕೆಟ್ಟದಾಗಿ ಮಾತನಾಡೋದು ನಿಲ್ಲಿಸಿ ಅಕ್ಕ- ತಂಗಿ ಥರ ನೋಡೋದು ಕಲಿರಿ ಎಂದು ಬುದ್ದಿ ಹೇಳಿದರು.
ಇಷ್ಟಕ್ಕೆ ಸುಮ್ಮನಾಗದ ಸಂಜನಾ, ಈ ಕೊಲೆ ಪ್ರಕರಣದಿಂದ ಸಾರಥಿ ಸಿನಿಕರಿಯರ್ ಎಂಡ್ ಎನ್ನುವ ಮಾತುಗಳು ಕೇಳಿಬರ್ತಿರೋದಕ್ಕೆ ರಿಯಾಕ್ಷನ್ ಕೊಟ್ಟರು. ಎಷ್ಟು ಜನ ಪೊಲಿಟಿಷಿಯನ್ಸ್ ಜೈಲಿಗೆ ಹೋಗಿ ಬಂದಿಲ್ಲ ಹೇಳಿ, ಅವರೆಲ್ಲರ ಕರಿಯರ್ ಮುಗಿದಿದೆಯಾ? ಇಲ್ಲ ಅಲ್ಲವಾ ಸೋ ದರ್ಶನ್ ಸರ್ ಕರಿಯರ್ ಇಲ್ಲಿಗೆ ಮುಗಿಯಲ್ಲ. ಒಳ್ಳೆ ಸಿನಿಮಾಗಳನ್ನ ಮಾಡ್ತಾರೆ, ಬ್ಲಾಕ್ ಬಸ್ಟರ್ ಹಿಟ್ ಕೊಡ್ತಾರೆ. ಅವರ ಕರಿಯರ್ ಇನ್ನೂ ಚೆನ್ನಾಗಿ ಇರುತ್ತೆ, ತಾವೆಲ್ಲರೂ ನೋಡ್ತೀವಿ ಎಂದು ತಮ್ಮ ಆತ್ಮ ವಿಶ್ವಾಸ ಹೊರಹಾಕಿದರು.
ಈ ಮಧ್ಯೆ ತಾವು ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ಜೈಲುವಾಸ ಅನುಭವಿಸಿದ ದಿನಗಳನ್ನ ಮೆಲುಕು ಹಾಕಿದ ಸಂಜನಾ, ಡ್ರಗ್ಸ್ ಕೇಸ್ ನಲ್ಲಿ ಕ್ಲೀನ್ ಚಿಟ್ ಸಿಕ್ಕ ಸಂಗತಿಯನ್ನ ಗ್ಯಾರಂಟಿ ನ್ಯೂಸ್ ಜತೆ ಹಂಚಿಕೊಂಡರು. ಪ್ರತಿಯೊಬ್ಬರ ಜೀವನದಲ್ಲಿ ಅಗ್ನಿ ಪರೀಕ್ಷೆ ಎದುರಾಗುತ್ತೆ, ನನಗೂ ಅದೇ ಪರಿಸ್ಥಿತಿ ಬಂದಿತ್ತು. ಇದೀಗ ಹೈಕೋರ್ಟ್ ಎಫ್ ಐ ಆರ್ ರದ್ದು ಮಾಡಿ ತೀರ್ಪು ನೀಡಿದೆ. ಡ್ರಗ್ಸ್ ಕೇಸ್ ನಲ್ಲಿ ನಂಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಖುಷಿ ಹಂಚಿಕೊಂಡರು.
ಎಲ್ಲಾ ನ್ಯಾಯಾಲಯಕ್ಕಿಂತ ಭಗವಂತನ ನ್ಯಾಯಾಲಯ ದೊಡ್ಡದು . ನಾನು ಯಾರನ್ನೂ ದ್ವೇಷಿಸಲ್ಲ. ದೇವರೇ ನೋಡಿಕೊಳ್ತಾನೆ ಎಲ್ಲರನ್ನೂ ಎಂದ ಸಂಜನಾ, ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದಕ್ಕೆ ಎಷ್ಟೋ ಅವಕಾಶಗಳು ಕೈ ತಪ್ಪಿ ಹೋಗಿದೆ, ಡಿಫ್ರೆಷನ್ ಗೆ ಕೂಡ ಹೋಗಿದ್ದೆ. ಅದೆಲ್ಲದರಿಂದ ಹೊರಬಂದು, ಸಂಜನಾ ಗಲ್ರಾಣಿ ಫೌಂಡೇಶನ್ ಕಡೆಯಿಂದ ಸಹಾಯ ಮಾಡಿದ್ದೇನೆ ಕರೋನಾ ಸಮಯದಲ್ಲಿ. ಇದೇ ಟೈಮ್ ಗೆ ದೇವರು ಮಗನನ್ನ ವರವಾಗಿ ಕೊಟ್ಟಿದ್ದಾನೆ. ಸದ್ಯ ಮದರ್ ವುಡ್ ಎಂಜಾಯ್ ಮಾಡ್ತಿದ್ದೀನಿ, ಒಳ್ಳೆ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡೋದಾಗಿ ತಿಳಿಸಿದ್ದಾರೆ. ಎನಿವೇ ಆದಷ್ಟು ಬೇಗ ಸಂಜನಾ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಲಿ, ಸಿಲ್ವರ್ ಸ್ಕ್ರೀನ್ ಮೇಲೆ ಶೈನ್ ಆಗಲಿ.