ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ದರ್ಶನ್ ಬಂಧನವಾಗಿ ಸುಮಾರು ಇಪ್ಪತ್ತು ದಿನಗಳು ಕಳೆಯುತ್ತಿದ್ದು, ಈಗಾಗಲೇ ಕೆಲವು ನಟ ನಟಿಯರು ದರ್ಶನ್ ಭೇಟಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ಗೆ ಬಹಳ ಆಪ್ತರಾದ ಮಾಜಿ ಸಂಸದೆ ಸುಮಲತಾ ಅಂಬರೀಷ್, ನಟ ಅಭಿಷೇಕ್ ಅಂಬರೀಶ್ ಸೇರಿದಂತೆ ಕೆಲ ದರ್ಶನ್ ಅತ್ಯಾಪ್ತರು ಸೈಲೆಂಟ್ ಆಗಿರುವುದು ಚರ್ಚೆಗೆ ಕಾರಣವಾಗಿತ್ತು. ದರ್ಶನ್ ನನ್ನ ದೊಡ್ಡ ಮಗ ಎಂದೇ ಹೇಳುತ್ತಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಷ್ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದರಿಂದ ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು.
ಈ ಬೆನ್ನಲ್ಲೇ ಇಂದು ಸುಮಲತಾ ಅಂಬರೀಷ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿರುವ ಪೋಸ್ಟ್ವೊಂದು ಎಲ್ಲರ ಗಮನ ಸೆಳೆದಿದೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಒಂದು ಕೃಷ್ಣ ವಾಕ್ಯ ಹಂಚಿಕೊಂಡಿರುವ ಸುಮಲತಾ ಅಂಬರೀಷ್ ಪರೋಕ್ಷವಾಗಿ ದರ್ಶನ್ ಪರ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ‘ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತದೆ. ಕೇವಲ ನಂಬಿಕೆ ಇರಲಿ’ ಎನ್ನುವ ಸಾಲುಗಳನ್ನು ಸುಮಲತಾ ಹಂಚಿಕೊಂಡಿದ್ದು ದರ್ಶನ್ ಬಗ್ಗೆ ಈ ಸಾಲುಗಳನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ .