ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಮಿಂಚುತ್ತಿರುವುದು ಮಾತ್ರವಲ್ಲದೇ, ದಕ್ಷಿಣ ಭಾರತದಲ್ಲೂ ಮಿಂಚಲು ರೆಡಿಯಾಗಿದ್ದಾರೆ. ‘ದೇವರ’ ಸಿನಿಮಾ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಜೂನಿಯರ್ ಎನ್ಟಿಆರ್ ಜೊತೆ ನಟಿಸುವ ಅವಕಾಶ ಜಾನ್ವಿ ಕಪೂರ್ಗೆ ಸಿಕ್ಕಿದೆ. ಈ ಸಿನಿಮಾ ಎರಡು ಪಾರ್ಟ್ನಲ್ಲಿ ಮೂಡಿಬರುತ್ತಿದೆ. ‘ದೇವರ: ಪಾರ್ಟ್ 1’ ಸಿನಿಮಾ ಸೆಪ್ಟೆಂಬರ್ 27ರಂದು ಬಿಡುಗಡೆ ಆಗಲಿದೆ. ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. ರಿಲೀಸ್ಗೆ ಕ್ಷಣಗಣನೆ ಶುರುವಾಗಿರುವ ಈ ಸಮಯದಲ್ಲಿ ಜಾನ್ವಿ ಕಪೂರ್ ಬಗ್ಗೆ ಜೂನಿಯರ್ ಎನ್ಟಿಆರ್ ಅವರು ತಕರಾರು ತೆಗೆದಿದ್ದಾರೆ.
‘ದೇವರ’ ಸಿನಿಮಾದ ಪ್ರಚಾರದ ಸಲುವಾಗಿ ಸಿನಿಮಾ ತಂಡದವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜೂನಿಯರ್ ಎನ್ಟಿಆರ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಅವರು ಸಿನಿಮಾದ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಜಾನ್ವಿ ಕಪೂರ್ ಬಗ್ಗೆ ಜೂನಿಯರ್ ಎನ್ಟಿಆರ್ ಅವರು ಒಂದು ದೂರು ಹೇಳಿದರು.
‘ಜಾನ್ವಿ ಕಪೂರ್ ಹೈದರಾಬಾದ್ನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಅವರಿಗಾಗಿ ನಾನು ಎರಡು ಬಾರಿ ಒಳ್ಳೆಯ ಊಟ ಕಳಿಸಿದ್ದೆ. ಆದರೆ ನಾನು ಈಗ ಮುಂಬೈಗೆ ಬಂದು ಒಂದು ದಿನ ಕಳೆದಿದೆ. ಒಂದು ಕಾಳು ಊಟವನ್ನೂ ನನಗೆ ಅವರು ಕಳಿಸಿಲ್ಲ. ನನಗಾಗಿ ಅವರ ಕೈರುಚಿಯ ಅಡುಗೆ ಕಳಿಸುವುದು ಬಿಡಿ, ರೆಸ್ಟೋರೆಂಟ್ನಿಂದಲೂ ಊಟ ಆರ್ಡರ್ ಮಾಡಿಲ್ಲ’ ಎಂದು ಜೂ. ಎನ್ಟಿಆರ್ ಅವರು ದೂರಿದ್ದಾರೆ. ಆದರೆ ಅವರು ಈ ರೀತಿ ಹೇಳಿದ್ದು ತಮಾಷೆಗಾಗಿ. ಆದ್ದರಿಂದ ಜಾನ್ವಿ ಕಪೂರ್ ಅವರು ಜೋರಾಗಿ ನಕ್ಕಿದ್ದಾರೆ.
ಈ ಶನಿವಾರ (ಸೆ.28) ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಹೊಸ ಸಂಚಿಕೆ ಪ್ರಚಾರ ಆಗಲಿದೆ. ನೆಟ್ಫ್ಲಿಕ್ಸ್ ಮೂಲಕ ಈ ಕಾರ್ಯಕ್ರಮ ಬಿತ್ತರ ಆಗಲಿದೆ. ‘ದೇವರ’ ಸಿನಿಮಾದ ಬಗ್ಗೆ ಅನೇಕ ವಿಚಾರಗಳನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ. ಅದರ ಪ್ರೋಮೋ ಈಗ ಬಿಡುಗಡೆಯಾಗಿ ವೈರಲ್ ಆಗಿದೆ. ‘ಯಾವಾಗಲೂ ಶ್ರೀದೇವಿ ಅವರೇ ನನ್ನ ಫೆವರಿಟ್ ಬಾಲಿವುಡ್ ನಟಿ’ ಎಂದು ಜೂನಿಯರ್ ಎನ್ಟಿಆರ್ ಹೇಳಿದ್ದಾರೆ. ‘ದಕ್ಷಿಣದ ನನ್ನ ಫೇವರಿಟ್ ನಟಿ ಕೂಡ ಶ್ರೀದೇವಿ’ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.