ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ-1 ಗಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಚಿತ್ರಜಗತ್ತೇ ಕಾತುರದಿಂದ ಕಾದು ಕುಳಿತಿರುವುದು ನಿಮಗೆಲ್ಲ ಗೊತ್ತೆಯಿದೆ. ಶೆಟ್ರ ಕಲ್ಪನೆಯಲ್ಲಿ ತಯಾರಾಗ್ತಿರೋ ಕಾಂತಾರ ಪ್ರೀಕ್ವೆಲ್ ಹೇಗಿರಬಹುದು? ಮೊದಲ ನೋಟದಲ್ಲೇ ಪರುಷರಾಮನ ಅವತಾರವೆತ್ತಿರೋ ಕಾಡುಬೆಟ್ಟು ಶಿವಪ್ಪ ಇನ್ಯಾವೆಲ್ಲ ಲುಕ್ನಲ್ಲಿ ಕಾಣಿಸಿಕೊಳ್ಳಬಹುದು? ಟೀಸರ್ ಯಾವಾಗ ರಿಲೀಸ್ ಆಗ್ಬೋದು ? ಈ ವರ್ಷವೇ ಸಿನಿಮಾ ತೆರೆಗೆ ಬರಬಹುದಾ? ಹೀಗೆ ಒಂದಿಷ್ಟು ಕುತೂಹಲದ ಪ್ರಶ್ನೆಗಳನ್ನಿಟ್ಟುಕೊಂಡು ಸಿನಿಮಾ ಪ್ರೇಮಿಗಳು ಕಾಂತಾರ ಭಾಗ-1ರತ್ತ ಚಿತ್ತ ನೆಟ್ಟಿದ್ದಾರೆ. ಹೀಗಿರುವಾಗಲೇ ಶೆಟ್ರು ತಮ್ಮ ಕಾಂತಾರ ಬಗೆಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ತಮ್ಮ ನಿರ್ಮಾಣದ ಶಿವಮ್ಮ ಸಿನಿಮಾ ಬಿಡುಗಡೆಗೆಗಾಗಿ ಸುದ್ದಿಗೋಷ್ಠಿ ಏರ್ಪಡಿಸಿದ್ದ ಶೆಟ್ರು ಕಾಂತಾರ-1 ಬಗ್ಗೆಯೂ ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡರು. ಈಗಾಗಲೇ ಫಸ್ಟ್ ಷೆಡ್ಯೂಲ್ಡ್ ಶೂಟಿಂಗ್ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡ್ಬೇಕಿದೆ. ಹುಟ್ಟೂರು ಕುಂದಾಪುರದ ಕೆರಾಡಿಯಲ್ಲಿ ಬೃಹತ್ ಗಾತ್ರದ ಸೆಟ್ ಹಾಕಿದ್ದು, ಕಂಪ್ಲೀಟ್ ಶೂಟಿಂಗ್ ಅಲ್ಲಿಯೇ ನಡೆಯಲಿದೆ. ಹೀಗಾಗಿ, ಫ್ಯಾಮಿಲಿ ಸಮೇತ ಕೆರಾಡಿಗೆ ಶಿಫ್ಟ್ ಆಗ್ತಿದ್ದೇವೆ. ಶೂಟಿಂಗ್ ಮುಗಿಯೋವರೆಗೂ ಮಗನ ಸ್ಕೂಲ್ ಮಿಸ್ ಆಗ್ಬಾರ್ದು ಅನ್ನೋ ಕಾರಣಕ್ಕೆ ಶಾಲೆಗೆ ಕೆರಾಡಿಯಲ್ಲೇ ಸೇರಿಸುತ್ತಿರುವುದಾಗಿ ರಿಷಬ್ ಹೇಳಿಕೊಂಡಿದ್ದಾರೆ. ನಿಮಗೆಲ್ಲ ಗೊತ್ತಿರುವಂತೆ ರಿಷಬ್ ಪತ್ನಿ ಪ್ರಗತಿಯವರು ಕಾಂತಾರದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ವರ್ಕ್ ಮಾಡಿದ್ದರು. ಜತೆಗೆ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಈಗಲೂ ಕೂಡ ಕಾಂತಾರ-1 ಗಾಗಿ ಕಾಸ್ಟ್ಯೂಮ್ ಡಿಸೈನ್ ವಿಭಾಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ ಕಾಂತಾರ-1 ಗಾಗಿ ಶೆಟ್ರು ಕಲರಿಪಯಟ್ಟು ಕರಗತ ಮಾಡಿಕೊಂಡಿದ್ದಾರೆ. ಪಾತ್ರಕ್ಕಾಗಿ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದ ಶೆಟ್ರು ಈಗ 8 ಕೆಜಿ ತೂಕ ಇಳಿಸಿಕೊಂಡು ಎರಡನೇ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭರ್ತಿ 100 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಬೆಳಗ್ಗೆ 5 ಗಂಟೆಗೆ ಮೇಕಪ್ ಹಾಕ್ಕೊಂಡು ಸೂರ್ಯನ ಆಗಮನಕ್ಕಾಗಿ ಕಾಯ್ತೇವೆ ಅಂತ ರಿಷಬ್ ಹೇಳಿಕೊಂಡಿದ್ದಾರೆ. ಇನ್ನೂ ಈ ವರ್ಷ ಸಿನಿಮಾ ತೆರೆಕಾಣಲ್ಲ ಅನ್ನೋದನ್ನ ಖಚಿತ ಪಡಿಸಿರುವ ಅವರು, ಹೊಸವರ್ಷಕ್ಕೆ ಸ್ಪೆಷಲ್ಲಾಗಿ ಬಿಡುಗಡೆಯಾಗುತ್ತೆ. ಈ ವರ್ಷದ ಕೊನೆಗೆ ರಿಲೀಸ್ ಡೇಟ್ನ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಅನೌನ್ಸ್ ಮಾಡಲಿದೆ ಎಂದಿದ್ದಾರೆ.
ಇನ್ನೂ ಚಿತ್ರೀಕರಣದ ಹಂತದಲ್ಲೇ 125 ಕೋಟಿಗೆ ಓಟಿಟಿ ರೈಟ್ಸ್ ಸೇಲಾಗಿದ್ದು, ಕಾಂತಾರ-1 ಬಳಗಕ್ಕೆ ಅತೀವ ಸಂತಸ ತಂದಿದೆ. ಹೊಸ ಹುರುಪಿಂದ, ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡಲಿಕ್ಕೆ ಚೈತನ್ಯ ತುಂಬಿದೆ. ಸೀಕ್ವೆಲ್ಗಿಂತ ಪ್ರೀಕ್ವೆಲ್ಗೆ ಬಂಡವಾಳ ಹೆಚ್ಚು ಸುರಿಯುತಿದ್ದಾರೆ. 8 ರಿಂದ 9 ಪಟ್ಟು ಅಂದರೆ 125 ಕೋಟಿಯಷ್ಟು ಬಂಡವಾಳದಲ್ಲಿ ಕಾಂತಾರ1 ನಿರ್ಮಾಣಗೊಳ್ಳುತ್ತಿರುವ ಬಗ್ಗೆ ಸುದ್ದಿಯಿದೆ. ಚಿತ್ರದ ತಾರಾಬಳಗವೂ ದೊಡ್ಡದಿದೆ ಆದರೆ ಪ್ಯಾನ್ ಇಂಡಿಯಾ ಚಿತ್ರ ಎನ್ನುವ ಕಾರಣಕ್ಕೆ ಎಲ್ಲಾ ಭಾಷೆಯ ನಟರನ್ನ ಹಾಕ್ಕೊಬೇಕು ಎನ್ನುವ ಗೋಜಿಗೆ ಹೋಗಲ್ಲ. ಯಾಕಂದ್ರೆ, ‘ಕಾಂತಾರ’ ಸಿನಿಮಾದಲ್ಲಿ ಇದ್ದಿದ್ದು ಸ್ಥಳೀಯ ಕಲಾವಿದರೇ. ಆದಾಗ್ಯೂ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಯಿತು. ಜನರನ್ನು ಸಿನಿಮಾ ಹೇಗೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದಷ್ಟೇ ರಿಷಬ್ಗೆ ಮುಖ್ಯವಂತೆ. ‘ಕಾಂತಾರ ಸಿನಿಮಾ ನೋಡುವಾಗ ರಿಷಬ್ ಯಾಕೆ ಬೇಕು? ಅಲ್ಲಿ ಶಿವ ಪಾತ್ರ ಮುಖ್ಯ. ಜನರನ್ನು ಅವನು ಹಿಡಿದಿಟ್ಟುಕೊಳ್ಳುತ್ತಿದ್ದಾನಾ. ಅದು ಮಾತ್ರ ಮುಖ್ಯ’ ಎಂದಿದ್ದಾರೆ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ