ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಶೋ ಮ್ಯಾನ್ ಪ್ರೇಮ್ ಕತ್ತು ಹಿಸುಕಿ ಕೇಕೆ ಹೊಡೆದಿರೋ ಘಟನೆ ನಡೆದಿದೆ. ಕೆಡಿ ಸಿನಿಮಾದ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡಿರೋ ಬಾಲಿವುಡ್ ಚೆಲುವೆ ಶಿಲ್ಪಾ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಕೊನೆಯ ದಿನ ಕಾವೇರಿ ನದಿ ತೀರದಲ್ಲಿ ಕೆಡಿ ಚಿತ್ರೀಕರಣ ನಡೆದಿದ್ದು,ಸತ್ಯವತಿ ಉರುಫ್ ಶಿಲ್ಪಾ ಶೆಟ್ಟಿ ಪೋರ್ಷನ್ ಶೂಟಿಂಗ್ ಕಂಪ್ಲೀಟ್ ಆಗಿದೆ. ತಮ್ಮ ಭಾಗದ ಚಿತ್ರೀಕರಣ ಮುಗಿದಿದ್ದೇ ತಡ ಪ್ಯಾಕಪ್ ಪ್ಯಾಕಪ್ ಅಂತ ಶಿಲ್ಪಾ ಕುಣಿದಾಡಿದ್ದಾರೆ. ಇದೇ ವೇಳೆ ತಮಾಷೆ ಮಾಡುತ್ತಾ ಶೋ ಮ್ಯಾನ್ ಪ್ರೇಮ್ ಕತ್ತು ಹಿಸುಕಿ ಇವರಿಗೆ ಹಸಿವೇ ಆಗಲ್ಲ ಅನ್ಸುತ್ತೆ. ವಿತೌಟ್ ಬ್ರೇಕ್ ಕೆಲಸ ಮಾಡ್ತಾರೆ ಅದಕ್ಕೆ ಪ್ರತಿಫಲವಾಗಿ ಸಿನಿಮಾ ಅದ್ಭುತವಾಗಿ ಬಂದಿದೆ ಎಂದಿದ್ದಾರೆ. ಜೋಗಿ ಪ್ರೇಮ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದಿರೋ ಶಿಲ್ಪಾ ಶೆಟ್ಟಿ, ಪ್ರೇಮ್ ಕಲ್ಪನೆಯಲ್ಲಿ ಅರಳಿರೋ ಸತ್ಯವತಿ ಪಾತ್ರ ನಂಗೆ ಬಹಳ ಹಿಡಿಸಿದೆ, ಕೆಡಿ ಮೇಲೆ ನಿರೀಕ್ಷೆ ಹೆಚ್ಚಿದೆ ಎಂತಲೂ ತಿಳಿಸಿದ್ದಾರೆ. ಇಡೀ ಕೆಡಿ ಟೀಮ್ ಜೊತೆ ಸಂತೋಷವಾಗಿ ಕಾಲ ಕಳೆದು ಮುಂಬೈಗೆ ವಾಪಾಸ್ ಆಗಿದ್ದಾರೆ. ಅಂದ್ಹಾಗೇ, ಕೊನೆಯ ದಿನ ಶೂಟಿಂಗ್ ಸೆಟ್ನಲ್ಲಿ ನಡೆದ ತರ್ಲೆ ತಮಾಷೆಯನ್ನ ವಿಡಿಯೋ ಮೂಲಕ ನಟಿ ಶಿಲ್ಪಾ ಶೆಟ್ಟಿ ತಮ್ಮ ಸೋಷಿಯಲ್ ಸೈಟ್ನಲ್ಲಿ ಹಂಚಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಇತ್ತೀಚೆಗೆ ‘ಕೆಡಿ’ ಸಿನಿಮಾದ ಶೂಟಿಂಗ್ ಬಿಡುವಿನಲ್ಲಿ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರಿಗೆ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ಕುಳಿತು ಅವರು ಧ್ಯಾನ ಮಾಡಿದ್ದರು. ಆ ಸಂದರ್ಭದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು. ಇದೀಗ ಕೆಡಿ ಕೊನೆಯ ದಿನದ ಶೂಟಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ‘ಪ್ರೀತ್ಸೋದ್ ತಪ್ಪಾ’, ‘ಆಟೋ ಶಂಕರ್’, ‘ಒಂದಾಗೋಣ ಬಾ’ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದ ಮಂಗಳೂರು ಚೆಲುವೆ ಇದೀಗ ಕೆಡಿ ಮೂಲಕ ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ರೀಎಂಟ್ರಿ ಕೊಟ್ಟಿದ್ದಾರೆ. 19 ವರ್ಷಗಳ ನಂತರ ಮತ್ತೊಮ್ಮೆ ಕರುನಾಡಲ್ಲಿ ದಿಬ್ಬಣ ಹೊರಡಲಿದ್ದಾರೆ. ಕೆಜಿಎಫ್ ನಂತರ ಅಧೀರ ಸಂಜಯ್ ದತ್ತ್ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.
ಕೆಡಿ ನಿಮ್ಮೆಲ್ಲರಿಗೂ ಗೊತ್ತಿರೋ ಕನ್ನಡ ಚಿತ್ರರಂಗದ ಮತ್ತೊಂದು ದುಬಾರಿ ಸಿನಿಮಾ. ಶೋ ಮ್ಯಾನ್ ಪ್ರೇಮ್ ಆಕ್ಷನ್ ಕಟ್ ಹೇಳಿರೋ ಈ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀರೋ. ಕಂಪ್ಲೀಟ್ ರೆಟ್ರೋ ಸ್ಟೈಲ್ನಲ್ಲಿ ಚಿತ್ರೀಕರಣಗೊಂಡಿರೋ ಈ ಸಿನಿಮಾಗೆ ಕೆವಿಎನ ಸಂಸ್ಥೆ ಬಂಡವಾಳ ಹೂಡಿದೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ತಯಾರಾಗಿರೋ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು ಇದೀಗ ಸತ್ಯವತಿ ಉರುಫ್ ಶಿಲ್ಪಾ ಶೆಟ್ಟಿ ಭಾಗದ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ಉಳಿದ ಟಾಕಿಪೋಶನ್ ಹಾಗೂ ಪ್ಯಾಚ್ ವರ್ಕ್ ಮುಗಿಸಲಿರೋ ಚಿತ್ರತಂಡ, ಆಗಸ್ಟ್ 24ಕ್ಕೆ ಫಸ್ಟ್ ಸಿಂಗಲ್ ಸಾಂಗ್ ರಿಲೀಸ್ ಮಾಡಲಿದೆ. ಡಿಸೆಂಬರ್ಗೆ ಸಿನಿಮಾ ತೆರೆಗೆ ತರಲು ಸಿದ್ದತೆ ನಡೆಸ್ತಿದೆ. ಇನ್ನೂ ಕೆಡಿ ಆಡಿಯೋ ರೈಟ್ಸ್ ಮೂಲಕ ಹೊಸ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ. ಅಂದಹಾಗೆ, ಶಾರುಖ್ ನಟನೆಯ ‘ಪಠಾಣ್’ ಚಿತ್ರಕ್ಕೆ 180 ಜನರನ್ನು ಬಳಸಿ, ಆರ್ಕೆಸ್ಟ್ರಾ ಮಾಡಿಸಲಾಗಿತ್ತು. ಆದರೆ ‘ಕೆಡಿ’ ಸಿನಿಮಾ ಅದನ್ನು ಮೀರಿಸಿದೆ. ಆ ಮೂಲಕ ಮೇಕಿಂಗ್ ಹಂತದಲ್ಲೇ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಮಾಹಿತಿ ನೀಡಿದ್ದಾರೆ.