ತಮಿಳಿನ ಯಶಸ್ವಿ ನಿರ್ದೇಶಕ ಲೋಕೇಶ್ ಕನಗರಾಜ್ ಸಿನಿಮಾಗಳಲ್ಲಿ ವಿಲನ್ ಪಾತ್ರಗಳು ಸಖತ್ ಪವರ್ಫುಲ್ ಆಗಿರುತ್ತವೆ. ಮತ್ತು ದೊಡ್ಡ ನಟರನ್ನೇ ವಿಲನ್ ಪಾತ್ರಕ್ಕೆ ಲೋಕೇಶ್ ಆಯ್ಕೆ ಮಾಡುತ್ತಾರೆ. ವಿಜಯ್ ಸೇತುಪತಿ, ಸ್ಟಾರ್ ನಟ ಸೂರ್ಯ, ಸಂಜಯ್ ದತ್ ಹೀಗೆ ದೊಡ್ಡ ನಟರುಗಳನ್ನು ವಿಲನ್ ಪಾತ್ರಗಳಲ್ಲಿ ಲೋಕೇಶ್ ತೋರಿಸಿದ್ದಾರೆ. ಇದೀಗ ನಾಗಾರ್ಜುನ ಅವರನ್ನು ವಿಲನ್ ಆಗಿ ತೋರಿಸುವ ಉಮೇದಿನಲ್ಲಿದ್ದಾರೆ.
ಒಂದು ಕಾಲದಲ್ಲಿ ನಾಯಕ ನಟರಾಗಿ ಮಿಂಚಿದ ಕೆಲವರು ಈಗ ವಿಲನ್ಗಳಾಗಿ ಮಿಂಚುತ್ತಿದ್ದಾರೆ. ಜಗಪತಿಬಾಬು ಅದಕ್ಕೆ ಒಳ್ಳೆಯ ಉದಾಹರಣೆ. ಹಿಂದಿಯಲ್ಲಿ ಬಾಬಿ ಡಿಯೋಲ್, ಸೈಫ್ ಅಲಿ ಖಾನ್, ಸಂಜಯ್ ದತ್ ಇವರೆಲ್ಲ ನಾಯಕ ನಟರಾಗಿ ದೊಡ್ಡ ಹೆಸರು ಮಾಡಿದ್ದವರು ಈಗ ವಿಲನ್ ಆಗಿಯೂ ಮಿಂಚುತ್ತಿದ್ದಾರೆ. ಅಂತೆಯೇ ದಕ್ಷಿಣ ಭಾರತದಲ್ಲಿ ಕೆಲವು ನಾಯಕ ನಟರು ವಿಲನ್ಗಳಾಗಿದ್ದಾರೆ. ಆದರೆ ಈಗ ಸೂಪರ್ ಸ್ಟಾರ್ ಒಬ್ಬರು ವಿಲನ್ ಆಗಿ ನಟಿಸಲು ಮುಂದಾಗಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಇದು ಇಷ್ಟವಾಗುತ್ತಿಲ್ಲ.
ವೃತ್ತಿ ಬದುಕಿನ ಉದ್ದಕ್ಕೂ ರೊಮ್ಯಾಂಟಿಕ್ ಹೀರೋ, ಆಂಗ್ರಿ ಯಂಗ್ ಮ್ಯಾನ್, ಮಧ್ಯಮ ವರ್ಗದ ಡಾರ್ಲಿಂಗ್ ಆಗಿಯೇ ಕಾಣಿಸಿಕೊಂಡಿರುವ ನಟ ನಾಗಾರ್ಜುನ ಈಗ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಅಂದದಿಂದ ‘ಮನ್ಮಥ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಾಗಾರ್ಜುನ ಅವರನ್ನು ವಿಲನ್ ಆಗಿ ನೋಡಲು ಜನ ಸಿದ್ಧರಾಗಿಲ್ಲ ಎನಿಸುತ್ತಿದೆ. ಹಾಗಾಗಿ ನಾಗಾರ್ಜುನ ವಿಲನ್ ಆಗಿ ನಟಿಸಲು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ನಟ ನಾಗಾರ್ಜುನ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ತಮಿಳಿನ ಯಶಸ್ವಿ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ನಾಗಾರ್ಜುನ ಅವರನ್ನು ವಿಲನ್ ಆಗಿ ತೋರಿಸಲು ಇಷ್ಟಪಡುತ್ತಿದ್ದಾರೆ. ನಾಗಾರ್ಜುನ ಸಹ ಕತೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗ ಅಭಿಮಾನಿಗಳ ಆಕ್ಷೇಪ ಇರುವ ಕಾರಣ ಯಾವ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.