ಕಾಲಿವುಡ್ನ ಖ್ಯಾತ ನಟ ಸೂರ್ಯ ಅವರ ತಲೆಗೆ ಪೆಟ್ಟಾದ ಬಗ್ಗೆ ವರದಿ ಆಗಿದೆ. ಅವರು ಇತ್ತೀಚೆಗೆ ‘ಸೂರ್ಯ 44’ ಸಿನಿಮಾದ ಶೂಟ್ನಲ್ಲಿ ಬ್ಯುಸಿಯಾಗಿದ್ದರು. ಸೂರ್ಯ ಅವರಿಗೆ ಪೆಟ್ಟಾಗಿರೋ ಕಾರಣ ಸಿನಿಮಾ ಶೂಟ್ನ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ವರದಿ ಆಗಿದೆ. ಈ ತಿಂಗಳ ಆರಂಭದಲ್ಲಿ ಊಟಿಯಲ್ಲಿ ‘ಸೂರ್ಯ 44’ ಚಿತ್ರದ ಕೆಲಸ ಆರಂಭ ಆಗಿತ್ತು. ಈಗ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ಅವರು ನಿರ್ದೇಶನ ಮಾಡುತ್ತಿದ್ದಾರೆ.
ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅಪಘಾತ ಸಂಭವಿಸುತ್ತದೆ. ಸೂರ್ಯ ಸಿನಿಮಾದ ತಂಡದವರೂ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಆದಾಗ್ಯೂ ಅವಘಡ ಸಂಭವಿಸಿದೆ. ಈಗ ಸೂರ್ಯ ಚೇತರಿಕೆ ಕಂಡಿದ್ದಾರೆ. ಈ ಬಗ್ಗೆ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಪ್ರೀತಿಯ ಸೂರ್ಯ ಅಭಿಮಾನಿಗಳೇ, ಇದೊಂದು ಸಣ್ಣ ಗಾಯ. ಭಯ ಬೇಡ. ನಿಮ್ಮ ಪ್ರಾರ್ಥನೆ ಹಾಗೂ ಪ್ರೀತಿಯಿಂದ ಸೂರ್ಯ ಅಣ್ಣ ಅವರು ಆರಾಮಾಗಿ ಇದ್ದಾರೆ’ ಎಂದಿದ್ದಾರೆ.
ಈ ಘಟನೆ ಬಗ್ಗೆ ಕೇಳಿ ಸೂರ್ಯ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ವ್ಯಕ್ತವಾಗಿತ್ತು. ಆದರೆ, ಈಗ ನಿರ್ಮಾಪಕರು ಈ ಬಗ್ಗೆ ಮಾಹಿತಿ ಕೊಟ್ಟ ಬಳಿಕ ಎಲ್ಲರೂ ನಿಟ್ಟುಸಿರು ಬಿಡುವಂತೆ ಆಗಿದೆ. ಅವರು ಬೇಗ ಚೇತರಿಕೆ ಕಂಡು ಮತ್ತೆ ಶೂಟಿಂಗ್ ಸೆಟ್ ಸೇರಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.