ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಅಪ್ಕಮ್ಮಿಂಗ್ ಸಿನಿಮಾ “ಕೃಷ್ಣಂ ಪ್ರಣಯ ಸಖಿ”. ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಿನಿದುನಿಯಾದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸೌಂಡ್ ಮಾಡುತ್ತಲೇ ಇದೆ. ಇದೀಗ ಆಲ್ ಇಂಡಿಯಾ ಟ್ರೆಂಡಿಂಗ್ ಲಿಸ್ಟ್ನಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಸುದ್ದಿಯಲ್ಲಿದೆ. “ಕೃಷ್ಣಂ ಪ್ರಣಯ ಸಖಿ” ಚಿತ್ರದ ಚಿನ್ನಮ್ಮ ಹಾಡು ಯೂಟ್ಯೂಬ್ನಲ್ಲಿ ರಿಲೀಸ್ ಆಗಿ ಏಳೇ ದಿನಕ್ಕೆ 10 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತವಿರುವ ಈ ಹಾಡನ್ನ ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ. ಶೇಖರ್ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ವೆಂಕಟ್ ರಾಮಪ್ರಸಾದ್ ಛಾಯಾಗ್ರಹಣ ದಲ್ಲಿ ಚಿನ್ನಮ್ಮ ಬೊಂಬಾಟಾಗಿ ಮೂಡಿಬಂದಿದ್ದಾಳೆ.
ಪ್ರಸ್ತುತ ಆಲ್ ಇಂಡಿಯಾ “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಪ್ರಭಾಸ್ ನಟನೆಯ “ಕಲ್ಕಿ 2898 AD” ಚಿತ್ರದ “ಥೀಮ್ ಆಫ್ ಕಲ್ಕಿ” ಹಾಡಿದೆ. ಎರಡನೇ ಸ್ಥಾನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಚಿನ್ನಮ್ಮ ಸಾಂಗ್ ಇದೆ. ಮೂರನೇ ಸ್ಥಾನದಲ್ಲಿ ದಳಪತಿ ವಿಜಯ್ ಅಭಿನಯದ “ಗ್ರೇಟೆಸ್ಟ್ ಆಫ್ ಆಲ್ ಟೈಮ್” ಚಿತ್ರದ “ಚಿನ್ನ ಚಿನ್ನ ಕಣ್ಗಳ್” ಹಾಡಿದೆ. ಸದ್ಯ ಗಣಿ ಸಾಂಗ್ ನಾಗಲೋಟ ಮುಂದುವರೆಸಿದ್ದು, ಇದೇ ವೇಗದಲ್ಲಿ ವೀಕ್ಷಣೆಯಾಗುತ್ತಿದ್ದರೆ “ಚಿನ್ನಮ್ಮ” ಹಾಡು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ. ಇತ್ತೀಚಿಗೆ ಮಂತ್ರಿ ಮಾಲ್ ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಸುಪ್ರೀಂ ಹೀರೋ ಶಶಿಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಈ ಹಾಡನ್ನು ವೀಕ್ಷಿಸಬಹುದು.
ಇನ್ನೂ ಬಹು ನಿರೀಕ್ಷಿತ “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ಶ್ರೀನಿವಾಸರಾಜು ನಿರ್ದೇಶನ ಚಿತ್ರಕ್ಕಿದ್ದು, ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ್ದಾರೆ. ಅಂದ್ಹಾಗೇ, ಈ ಚಿತ್ರ ಆಗಸ್ಟ್ 15 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.