ನಿಷೇಧಿತ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ಮಲಯಾಳಂ ನಟ, ಗಾಯಕ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಪಿ.ಎಸ್.ಫರೀದುದ್ದೀನ್ರನ್ನ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಕೇರಳದ ಪುಲ್ಲಿಕ್ಕಾನಂನಲ್ಲಿ ವಾಹನ ತಪಾಸಣೆ ವೇಳೆ ಪಿ.ಎಸ್.ಫರೀದುದ್ದೀನ್ ಮಾದಕ ದ್ರವ್ಯ ಮತ್ತು ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಫರೀದುದ್ದೀನ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ 10.50 ಗ್ರಾಂ ಮಾದಕ ದ್ರವ್ಯ ಮತ್ತು 9 ಗ್ರಾಂ ಗಾಂಜಾ ಪತ್ತೆಯಾಗಿದೆ.
ಹಿರಿಯ ಅಧಿಕಾರಿಗಳು ಮಾತನಾಡಿ, ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ 10.50 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ. ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಇಂತಹ ಕೇಸ್ನಲ್ಲಿ 10 ರಿಂದ 20 ವರ್ಷ ಜೈಲು ಶಿಕ್ಷೆಗೆ ಅವಕಾಶ ಇದೆ. ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್-2 ರಿಯಾಲಿಟಿ ಶೋ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.