ಉದಯ್ ಕೆ ಮೆಹ್ತಾ ನಿರ್ಮಾಣದ, ಎ.ಪಿ.ಅರ್ಜುನ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ “ಮಾರ್ಟಿನ್” ಚಿತ್ರ ಕಳೆದವಾರ ದೇಶಾದ್ಯಂತ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಯಶಸ್ಸಿನ ಸಂತೋಷ ಹಂಚಿಕೊಳ್ಳಲು ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು.
ಮೊದಲು ನಾನು ತಂತ್ರಜ್ಞರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಾತನಾಡಿದ ನಾಯಕ ಧ್ರುವ ಸರ್ಜಾ, ನಮ್ಮ “ಮಾರ್ಟಿನ್” ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಮನ ತುಂಬಿ ಬಂದಿದೆ. ಈ ಯಶಸ್ಸಿಗೆ ಕಾರಣರಾದ ನಿರ್ಮಾಪಕರು, ನಿರ್ದೇಶಕರು, ಚಿತ್ರತಂಡದ ಸದಸ್ಯರು ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಅನಂತ ಧನ್ಯವಾದ. ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ ಎಂದರು ನಾಯಕ ಧ್ರುವ ಸರ್ಜಾ.
ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಬಿಡುಗಡೆಯಾಗಿರುವ ಬಹುತೇಕ ಚಿತ್ರಮಂದಿರಗಳಲ್ಲಿ ನಮ್ಮ “ಮಾರ್ಟಿನ್” ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್ ಮುಂತಾದ ಕಡೆಗೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮುಂದಿನವಾರ ವಿದೇಶದಲ್ಲೂ “ಮಾರ್ಟಿನ್” ರಿಲೀಸ್ ಆಗಲಿದೆ. ಈ ಸಂದರ್ಭದಲ್ಲಿ ನಾಯಕ ಧ್ರುವ ಸರ್ಜಾ, ನಾಯಕಿ ವೈಭವಿ ಶಾಂಡಿಲ್ಯ, ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಸೇರಿದಂತೆ ನನ್ನ ಇಡೀ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಎ.ಪಿ.ಅರ್ಜುನ್.
ನಿರ್ಮಾಪಕ ಉದಯ್ ಕೆ ಮೆಹ್ತಾ ಪುತ್ರ ಸೂರಜ್ ಮೆಹ್ತಾ ಸಹ ಎಲ್ಲರಿಗೂ ಧನ್ಯವಾದ ತಿಳಿಸಿ, ಚಿತ್ರ ಎಲ್ಲಾ ಕಡೆ ಯಶಸ್ವಿ ಪದರ್ಶನ ಕಾಣುತ್ತಿದೆ. ಕಲೆಕ್ಷನ್ ಸಹ ಉತ್ತಮವಾಗಿದೆ ಎಂದರು. ನಾಯಕಿ ವೈಭವಿ ಶಾಂಡಿಲ್ಯ, ಛಾಯಾಗ್ರಾಹಕ ಸತ್ಯ ಹೆಗಡೆ, ಪ್ರತಾಪ್, ವಜ್ರಾಂಗ್ ಶೆಟ್ಟಿ, ಶಿವಾರ್ಜುನ್, ಕುಮಾರ್ ಮುಂತಾದವರು ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.