ತಮಿಳಿನ ಜನಪ್ರಿಯ ನಟ ದಳಪತಿ ವಿಜಯ್ ಅವರು ಇತ್ತೀಚೆಗೆ ತಮಿಳಗ ವೆಟ್ರಿ ಕಳಗಂ ಎಂಬ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ನಂತರ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ನೀಟ್ ಪರೀಕ್ಷೆಗಳ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು ನಟ-ರಾಜಕಾರಣಿ ಈಗ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.
“ಜನರು ನೀಟ್ ಪರೀಕ್ಷೆಯಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ದೇಶಕ್ಕೆ ನೀಟ್ ಅಗತ್ಯವಿಲ್ಲ. ನೀಟ್ನಿಂದ ವಿನಾಯಿತಿಯೊಂದೇ ಪರಿಹಾರ. ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಿದ ನೀಟ್ ವಿರುದ್ಧದ ನಿರ್ಣಯವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ತಮಿಳುನಾಡು ಜನರ ಭಾವನೆಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕು ಎಂದು ವಿನಂತಿಸುತ್ತೇನೆ. ಶಿಕ್ಷಣವನ್ನು ಸಮಕಾಲೀನ ಪಟ್ಟಿಯಿಂದ ರಾಜ್ಯ ಪಟ್ಟಿಗೆ ತರಬೇಕು” ಎಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಜಯ್ ಹೇಳಿದ್ದಾರೆ.
“ಮಧ್ಯಂತರ ಪರಿಹಾರವಾಗಿ, ಭಾರತೀಯ ಸಂವಿಧಾನಕ್ಕೆ ‘ವಿಶೇಷ ಸಮಕಾಲೀನ ಪಟ್ಟಿ’ ರಚಿಸಲು ತಿದ್ದುಪಡಿ ಮಾಡಬೇಕು ಹಾಗೂ ಶಿಕ್ಷಣ ಮತ್ತು ಆರೋಗ್ಯವನ್ನು ಅದರ ಅಡಿಯಲ್ಲಿ ಸೇರಿಸಬೇಕು” ಎಂದು ತಮಿಳು ನಟ ಕಮ್ ರಾಜಕಾರಣಿ ವಿಜಯ್ ಹೇಳಿದ್ದಾರೆ. ಈ ಹಿಂದಿನಿಂದಲೂ ತಮಿಳುನಾಡು ಸರ್ಕಾರ ನೀಟ್ ವಿರೋಧಿಸುತ್ತಲೇ ಬಂದಿದ್ದು ಇಳಯ ದಳಪತಿ ವಿಜಯ್ ಇದಕ್ಕೆ ಬೆಂಬಲ ನೀಡಿದ್ದಾರೆ.